ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಅರ್ಜಿ ಆಹ್ವಾನ

ಮಡಿಕೇರಿ ಅ.14 : ಪ್ರಸಕ್ತ(2020-21) ಸಾಲಿನಲ್ಲಿ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2020-21 ನೇ ಸಾಲಿನಲ್ಲಿ ಸಾಲ ಸೌಲಭ್ಯ ಪಡೆಯಲು ಇಚ್ಛಿಸುವವರು ಆನ್‍ಲೈನ್ ಮುಖಾಂತರ ಅಗತ್ಯ ದಾಖಲಾತಿಗಳೊಂದಿಗೆ www.kacdc.karnataka.gov.in ನಲ್ಲಿ ನವೆಂಬರ್, 15 ರೊಳಗೆ ಅರ್ಜಿ ಸಲ್ಲಿಸಬೇಕು.
ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದವರಾಗಿರಬೇಕು. ನಮೂನೆ-ಜಿ ಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು. ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು. ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು. ಅರ್ಜಿದಾರರು ಆಧಾರ್‍ಕಾರ್ಡ್ ಹೊಂದಿರಬೇಕು.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಸಣ್ಣ ವ್ಯಾಪಾರ, ಸ್ವಯಂ ಉದ್ಯೋಗ ಮತ್ತಿತರ ವ್ಯಾಪಾರ ಚಟುವಟಿಕೆಗಳಿಗೆ ಸಾಲ ನೀಡಲಾಗುವುದು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.3 ಲಕ್ಷಗಳ ಮಿತಿಯ ಒಳಗಿರಬೇಕು. ಅರ್ಜಿದಾರರು 18 ವರ್ಷ ಮೇಲ್ಪಟ್ಟು 45 ವರ್ಷದ ಒಳಗಿನವರಾಗಿರಬೇಕು.
ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ ಮತ್ತಿತರ ವೃತ್ತಿಪರ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಲ್ಲಿ ಸಿಇಟಿ, ನೀಟ್(ಎನ್‍ಇಇಟಿ) ಮೂಲಕ ಆಯ್ಕೆಯಾಗಿ ಮತ್ತು ವೃತ್ತಿಪರ ಪಿಎಚ್‍ಡಿ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುವವರಿಗೆ ಸಾಲ ನೀಡಲಾಗುವುದು.
ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6 ಲಕ್ಷ ಮಿತಿಯೊಳಗಿರಬೇಕು. ಅರ್ಜಿದಾರರು 18 ವರ್ಷ ಮೇಲ್ಪಟ್ಟು 35 ವರ್ಷದ ಒಳಗಿನವರಾಗಿರಬೇಕು. ಪ್ರಾಂಶುಪಾಲರಿಂದ ದೃಢೀಕರಿಸಿದ ಪ್ರಸ್ತುತ ವರ್ಷದ ವ್ಯಾಸಂಗ ಪ್ರಮಾಣ ಪತ್ರ ಮತ್ತು ನಿಗದಿತ ಶುಲ್ಕ ನಮೂನೆ ಪತ್ರ ಹೊಂದಿರಬೇಕು. ಮಹಿಳೆಯರಿಗೆ ಶೇ.33 ರಷ್ಟು ಮತ್ತು ವಿಶೇಷ ಚೇತನರಿಗೆ ಶೇ.5 ರಷ್ಟು ಮೀಸಲಾತಿ ಇರುತ್ತದೆ. ಅರ್ಜಿದಾರರ ಮೊಬೈಲ್ ಸಂಖ್ಯೆ ಆಧಾರ್‍ಗೆ ಜೋಡಣೆಯಾಗಿರಬೇಕು. ಹೆಚ್ಚಿನ ವಿವರವನ್ನು www.kacdc.karnataka.gov.in ನಲ್ಲಿ ನೋಡಬಹುದು ಹಾಗೂ ಕಚೇರಿ ವೇಳೆಯಲ್ಲಿ 08272-221656 ಮತ್ತು ನಿಗಮದ ಸಹಾಯವಾಣಿ 9448451111, ಇ-ಮೇಲ್ : support.kacdc@karnataka.gov.in ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.