3 ನೇ ಬಾರಿ ಭರ್ತಿಯಾದ ಹಾರಂಗಿ : ಎರಡು ಸಾವಿರ ಕ್ಯುಸೆಕ್ ನೀರು ಬಿಡುಗಡೆ

14/10/2020

ಕುಶಾಲನಗರ : ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಈ ವರ್ಷದ ಅವಧಿಯಲ್ಲಿ ಮೂರನೇ ಬಾರಿಗೆ ಭರ್ತಿಯಾಗಿದ್ದು, ಬುಧವಾರದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ 4,700 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಒಳಹರಿವಿನ ಪ್ರಮಾಣವನ್ನು ಗಮನದಲ್ಲಿರಿಸಿಕೊಂಡು ನಾಲ್ಕು ಕ್ರಸ್ಟ್‍ಗೇಟ್‍ಗಳ ಮೂಲಕ ಒಂದು ಸಾವಿರ ಹಾಗೂ ವಿದ್ಯುತ್‍ಗ ಘಟಕದ ಮೂಲಕ 1,000ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಅಲ್ಲದೆ ಮುಖ್ಯ ನಾಲೆಗೆ 1600 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ.

ಶಾಸಕರ ಸೂಚನೆ: ಹಾರಂಗಿ ಅಣೆಕಟ್ಟೆಯಾಗಿರುವ ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಹೆಚ್ಚುವರಿಯಾಗಿ ನೀರನ್ನು ಸಂಗ್ರಹ ಮಾಡದೆ ಅಧಿಕ ನೀರನ್ನು ನದಿಗೆ ಹರಿಸುವಂತೆ ಶಾಸಕ ಅಪ್ಪಚ್ಚುರಂಜನ್ ಅವರು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ನೀರಾವರಿ ಇಲಾಖೆಯ ಅಧಿಕಾರಿಗಳು ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತಿದ್ದು ಒಳಹರಿವಿನ ಹೆಚ್ಚುವರಿ ಪ್ರಮಾಣದ ನೀರಿನ್ನು ನದಿಗೆ ಹರಿಸಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.