ಕಾವೇರಿ ತುಲಾಸಂಕ್ರಮಣ : ಸರ್ಕಾರದ ಮಾರ್ಗಸೂಚಿ ಪಾಲಿಸಲು ಜಿಲ್ಲಾಧಿಕಾರಿ ಸೂಚನೆ

14/10/2020

ಮಡಿಕೇರಿ ಅ.14 : ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ತಲಕಾವೇರಿಯಲ್ಲಿ ತುಲಾಸಂಕ್ರಮಣವನ್ನು ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿತ್ತು. ಆದರೆ ಈ ವರ್ಷ ಕೋವಿಡ್ ಸೋಂಕಿನಿಂದಾಗಿ ತುಲಾಸಂಕ್ರಮಣವನ್ನು ಸರಳವಾಗಿ ಆಚರಣೆ ಮಾಡಬೇಕಾಗಿದೆ.
ಜಿಲ್ಲೆಯಲ್ಲಿ ದಿನೇ ದಿನೇ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಕೋವಿಡ್ ಸೋಂಕು ಹೆಚ್ಚಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಹೆಚ್ಚಾಗಿ ಜನ ಸಂದಣಿ ಸೇರುವುದು ಉಚಿತವಾಗಿರುವುದಿಲ್ಲ. ಆದ್ದರಿಂದ ದಿನಾಂಕ:17-10-2020 ರಂದು ಬೆಳಗ್ಗೆ 7.03 ನಿಮಿಷಕ್ಕೆ ಜಿಲ್ಲೆಯ ತಲಕಾವೇರಿಯಲ್ಲಿ ನಡೆಯುವ ತುಲಾ ಸಂಕ್ರಮಣ ತೀರ್ಥೋದ್ಭವವನ್ನು ಸರಳವಾಗಿ ಆಚರಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ಧಿಷ್ಟ ಆದೇಶವನ್ನು ಹೊರಡಿಸುವುದು ಸೂಕ್ತವೆಂದು ಕಂಡುಬಂದ ಕಾರಣ ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್-19 ರೆಗ್ಯುಲೇಶನ್ 2020 ರ ನಿಯಮ 12, ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್-2005 ಕಲಂ.24(ಎ), (ಬಿ), 30(2), 33 ರಡಿ ಮತ್ತು ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ.144, ಕರ್ನಾಟಕ ಮೋಟಾರು ವಾಹನಗಳ ನಿಯಮ 1988 ರ ಕಲಂ.115, ಕರ್ನಾಟಕ ಮೋಟಾರು ವಾಹನಗಳ ನಿಯಮ 1989 ರ (ತಿದ್ದುಪಡಿ ನಿಯಮಾವಳಿ 1990) ನಿಯಮ 221ಎ(5) ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963 ರ ವಿಧಿ 31 ರಡಿಯಲ್ಲಿ ಪ್ರದತ್ತವಾದ ಅಧಿಕಾರದಂತೆ ಸರ್ಕಾರದ ಆದೇಶ/ಮಾರ್ಗಸೂಚಿ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ದಿನಾಂಕ:16-10-2020 ರ ಮಧ್ಯರಾತ್ರಿ 12 ಗಂಟೆಯಿಂದ 17-10-2020 ಮಧ್ಯರಾತ್ರಿ 12.00 ಗಂಟೆಯವರೆಗೆ ಜಾರಿಯಲ್ಲಿರುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.
ಅಕ್ಟೋಬರ್, 17 ರಂದು ಬೆಳಗ್ಗೆ 7.03 ನಿಮಿಷಕ್ಕೆ ನಡೆಯುವ ತೀರ್ಥೋದ್ಭವದಲ್ಲಿ ಜನ ಸಂದಣಿ ಸೇರಲು ಅವಕಾಶ ಇರುವುದಿಲ್ಲ. ದೇವಸ್ಥಾನ ವ್ಯವಸ್ಥಾಪನಾ ಸಮಿತಿಯು ಆರೋಗ್ಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿಕೊಂಡು ತಲಕಾವೇರಿಯಲ್ಲಿ ತೀರ್ಥೋದ್ಭವ ಸಂದರ್ಭದಲ್ಲಿ ಇರಬೇಕಾದ ಸದಸ್ಯರುಗಳಿಗೆ 48 ಗಂಟೆಗಳ ಮುಂಚೆ ಆರ್.ಟಿ.ಸಿ.ಪಿ.ಆರ್ ಕೋವಿಡ್ ಪರೀಕ್ಷೆ ನಡೆಸಿ, ನೆಗೆಟಿವ್ ವರದಿ ಇರುವ ದೃಢೀಕರಣವನ್ನು ಇಟ್ಟುಕೊಳ್ಳತಕ್ಕದ್ದು ಮತ್ತು ಎಲ್ಲಾ ಸದಸ್ಯರು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದ್ದು, ಇದರ ಪಾಲನೆಯು ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಜವಾಬ್ದಾರಿಯಾಗಿದೆ. ಅನ್ನದಾನ ನಡೆಸಲು ಅವಕಾಶ ಇರುವುದಿಲ್ಲ. ದೇವಸ್ಥಾನ ಅಥವಾ ದೇವಸ್ಥಾನ ಛತ್ರಗಳಲ್ಲಿ ತೀಥೋದ್ಭವ ಹಿಂದಿನ ದಿನದ ರಾತ್ರಿ ಉಳಿದುಕೊಳ್ಳಲು ಅವಕಾಶ ಇರುವುದಿಲ್ಲ. ಅಕ್ಟೋಬರ್, 17 ರಂದು ಬೆಳಗ್ಗೆ 6 ಗಂಟೆಯ ನಂತರ ಮಾತ್ರ ಭಾಗಮಂಡಲದಿಂದ ತಲಕಾವೇರಿಗೆ ವಾಹನ ಸಂಚಾರಕ್ಕೆ ಅವಕಾಶ ಇರುತ್ತದೆ.
ಹೆಚ್ಚುವರಿಯಾಗಿ ಯಾವುದೇ ಬೆಳಕಿನ ವ್ಯವಸ್ಥೆ ಹಾಗೂ ಧ್ವನಿವರ್ಧಕ ವ್ಯವಸ್ಥೆ ಮಾಡಲು ಅವಕಾಶ ಇರುವುದಿಲ್ಲ. ಸಂಬಂಧಪಟ್ಟ ಗ್ರಾಮ ಪಂಚಾಯತಿಯು ಪ್ರಸ್ತುತ ಇರುವ ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡುವುದು. ಹೊಸದಾಗಿ ಯಾವುದೇ ಅಂಗಡಿಗಳಿಗೆ ಅವಕಾಶವಿಲ್ಲ ಮತ್ತು ಹೊಸದಾಗಿ ರಸ್ತೆ ಬದಿಯಲ್ಲಿ ಅಂಗಡಿಗಳನ್ನು ಹಾಕಿ ವ್ಯಾಪಾರ ಮಾಡಲು ಅವಕಾಶ ಇರುವುದಿಲ್ಲ. ಈ ಕಾರ್ಯಕ್ರಮಕ್ಕೆ ಯಾವುದೇ ಪಾಸ್‍ಗಳನ್ನು ವಿತರಿಸಲಾಗುವುದಿಲ್ಲ. ಹೋಂ ಸ್ಟೇ/ ರೆಸಾರ್ಟ್/ ಲಾಡ್ಜ್/ ಹೊಟೇಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಕಡ್ಡಾಯವಾಗಿ ಕೇಂದ್ರ/ ರಾಜ್ಯ ಸರ್ಕಾರದಿಂದ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು. ತಪ್ಪಿದಲ್ಲಿ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ಗುಂಪು ಗುಂಪಾಗಿ ಸೇರಿ ಹೋಗಲು ಅವಕಾಶ ಇರುವುದಿಲ್ಲ. ಗುಂಪು ಗುಂಪಾಗಿ ಜನರನ್ನು ದೊಡ್ಡ ವಾಹನಗಳಲ್ಲಿ ಕರೆತರಲು ಅವಕಾಶ ಇರುವುದಿಲ್ಲ. ಕಡ್ಡಾಯವಾಗಿ ಸರ್ಕಾರದ ಕೋವಿಡ್-19 ಕಾರ್ಯವಿಧಾನವನ್ನು (SಔP) ಪಾಲಿಸತಕ್ಕದ್ದು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಅವರು ಎಲ್ಲ ಆಗುಹೋಗುಗಳಿಗೆ ಪೂರ್ಣ ಜವಾಬ್ದಾರರಾಗಿರುತ್ತಾರೆ. ಈ ಆದೇಶದ ಉಲ್ಲಂಘನೆಯು ಐ.ಪಿ.ಸಿ ಸೆಕ್ಷನ್ 188 ರಡಿ ದಂಡನೀಯವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.