ಅರಣ್ಯಾಧಿಕಾರಿಗಳ ದಾಳಿ : ಕೊಡಗರಹಳ್ಳಿಯಲ್ಲಿ ಬೀಟೆ ನಾಟ, ಲಾರಿ, 2 ಕಾರು ವಶ

14/10/2020

ಮಡಿಕೇರಿ ಅ.14 : ಕುಶಾಲನಗರ ಸಮೀಪದ ಕೊಡಗರಹಳ್ಳಿ ಬಳಿ ಕಾಫಿ ತೋಟದಿಂದ ಅಕ್ರಮವಾಗಿ ಬೀಟೆ ಮರ ಸಾಗಿಸುತ್ತಿದ್ದ ಕಳ್ಳರ ತಂಡವೊಂದನ್ನು ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಪತ್ತೆಹಚ್ಚಿ ಲಕ್ಷಾಂತರ ಮೌಲ್ಯದ ಬೀಟೆ ನಾಟಗಳು ಸೇರಿದಂತೆ ಒಂದು ಲಾರಿ, ಎರಡು ಕಾರುಗಳನ್ನು ವಶಪಡಿಸಿಕೊಂಡ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಕಾರ್ಯಾಚರಣೆ ಸಂದರ್ಭ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೊಚ್ಚೇರ ನೆಹರು ಅವರು ತಿಳಿಸಿದ್ದಾರೆ.
ಕೊಡಗರಹಳ್ಳಿ ಬಳಿಯ ಸಿದ್ದಮ್ಮ ಎಸ್ಟೇಟ್‍ನಲ್ಲಿ ಬಿದ್ದಿದ್ದ ಬೃಹತ್ ಗಾತ್ರದ ಬೀಟೆ ಮರವನ್ನು ಕಳ್ಳರ ತಂಡ ತುಂಡರಿಸಿ ನಾಟಗಳಾಗಿ ಪರಿವರ್ತಿಸಿ ಲಾರಿಗೆ ತುಂಬುತ್ತಿದ್ದ ಸಂದರ್ಭ ಕಾರ್ಯಾಚರಣೆ ನಡೆಸಲಾಗಿದೆ. ಸ್ಥಳದಲ್ಲಿ ಟಿಪ್ಪರ್ ಲಾರಿಯಲ್ಲಿ (ಕೆಎ.17.ಬಿ.8090) 6 ಬೀಟೆ ಮರ ನಾಟಗಳನ್ನು ತುಂಬಲಾಗಿದ್ದು ಸಮೀಪದಲ್ಲಿ ಎರಡು ಕಾರುಗಳು ಪತ್ತೆಯಾಗಿವೆ. ಟೊಯೊಟೊ ಕಾರು (ಕೆಎ.12.ಎಂಎ.7577) ಮತ್ತು ಮಾರುತಿ ಕಾರು (ಕೆಎ.03.ಎಂವೈ.3884) ವಶಪಡಿಸಿಕೊಳ್ಳಲಾಗಿದೆ. ತೋಟದ ಮಾಲೀಕ ದೀಪಕ್ ಬಸವರಾಜ್ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ತಂಡ ಸ್ಥಳಕ್ಕೆ ಧಾವಿಸಿದ್ದಾರೆ. ಡಿಎಫ್‍ಒ ಪ್ರಭಾಕರನ್, ಎಸಿಎಫ್ ನೆಹರು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್, ಉಪವಲಯ ಅರಣ್ಯಾಧಿಕಾರಿ ಮಹದೇವ್ ನಾಯಕ್ ನೇತೃತ್ವದಲ್ಲಿ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಕಾರ್ಯಚರಣೆ ನಡೆಸಿದರು. ಮಹಜರು ನಡೆಸಿದ ಸಂದರ್ಭ ಕುಶಾಲನಗರದ ತಾವರೆಕೆರೆ ಬಳಿಯಿರುವ ಮರದ ಮಿಲ್‍ನ ಅಬ್ದುಲ್ ಖಾದರ್ ಎಂಬವರ ಪುತ್ರ ಎಚ್.ಕೆ.ಸುಮೇರ್ ಎಂಬಾತನಿಗೆ ಸೇರಿದ ಕಾರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಮಾಹಿತಿ ಒದಗಿದ್ದು ಕಾರ್ಯಚರಣೆಯಲ್ಲಿ ಅಂದಾಜು 25 ಲಕ್ಷಕ್ಕೂ ಅಧಿಕ ಮೌಲ್ಯದ ಮರ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಅರಣ್ಯ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಡಿ.ಸಿ.ಗಣೇಶ್, ಸಿದ್ದರಾಮ, ಕೆ.ಟಿ.ದಿನೇಶ್, ಚಾಲಕ ಎಂ.ಆರ್.ಚಂದ್ರ ಮತ್ತು ಆರ್‍ಆರ್‍ಟಿ ತಂಡದ ಸದಸ್ಯರು ಪಾಲ್ಗೊಂಡಿದ್ದರು.