ಕಾವೇರಿ ತೀರ್ಥೋದ್ಭವ : ಶಾಸಕರು ಭಕ್ತರ ಭಾವನೆಗೆ ಸ್ಪಂದಿಸಲಿ : ಕೆ.ಪಿ.ಚಂದ್ರಕಲಾ ಒತ್ತಾಯ

15/10/2020

ಮಡಿಕೇರಿ ಅ.15 : ಕೊಡಗಿನ ಆರಾಧ್ಯ ದೇವಿ ಕಾವೇರಿಯ ತೀರ್ಥೊದ್ಭವದಂದು ಅಸಂಬದ್ಧ ನಿಯಮಗಳನ್ನು ರೂಪಿಸಿ ಸ್ಥಳೀಯ ಭಕ್ತರಿಗೆ ನಿರ್ಬಂಧ ವಿಧಿಸುವ ಮೂಲಕ ಜಿಲ್ಲಾಡಳಿತ ಗೊಂದಲ ಸೃಷ್ಟಿ ಮಾಡಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಪಿ.ಚಂದ್ರಕಲಾ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ತೀರ್ಥೋದ್ಭವ ಸಮಯದಲ್ಲಿ ಭಕ್ತರಿಗೆ ನಿರ್ಬಂಧ ಹೇರಿ ಆಯ್ದ ವ್ಯಕ್ತಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಆದರೆ ಆಯ್ದ ವ್ಯಕ್ತಿಗಳು ಯಾರು ಎನ್ನುವ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳು ಹಾಗೂ ಅವರ ಕುಟುಂಬ ವರ್ಗದವರಿಗೆ ಮಾತ್ರ ಪ್ರವೇಶ ಕಲ್ಪಿಸಿರುವ ಬಗ್ಗೆ ಅನುಮಾನಗಳು ಮೂಡುತ್ತಿದೆ. ಕೊಡಗಿನ ಇಬ್ಬರು ಶಾಸಕರು ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿ ಅಧಿಕಾರಿಗಳಿಗೆ ಎಲ್ಲವನ್ನೂ ವಹಿಸಿರುವುದು ಸರಿಯಲ್ಲ. ಜನಪ್ರತಿನಿಧಿಗಳಿಗೆ ತಮ್ಮದೇ ಆದ ಜವಾಬ್ದಾರಿಗಳಿದ್ದು, ನುಣುಚಿಕೊಳ್ಳುವುದನ್ನು ಬಿಟ್ಟು ಭಕ್ತರ ಭಾವನೆಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡಲಿ ಎಂದು ಚಂದ್ರಕಲಾ ಒತ್ತಾಯಿಸಿದ್ದಾರೆ.
ಇಬ್ಬರು ಶಾಸಕರು ಜನಪರವಾಗಿ ಸೂಕ್ತ ನಿರ್ಧಾರವನ್ನು ಪ್ರಕಟಿಸುವ ಮೂಲಕ ಭಕ್ತರಲ್ಲಿ ಮೂಡಿರುವ ಗೊಂದಲವನ್ನು ನಿವಾರಿಸಬೇಕೆಂದು ಅವರು ತಿಳಿಸಿದ್ದಾರೆ.