ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಮಹಾಸಭೆ : ವಿಶೇಷ ಪ್ಯಾಕೇಜ್ ಕುರಿತು ಕೇಂದ್ರದೊಂದಿಗೆ ಚರ್ಚೆ : ಡಾ.ಕೆ.ಜಿ.ಜಗದೀಶ್ ಭರವಸೆ

ಮಡಿಕೇರಿ ಅ.15 : ಸತತ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಕಾಫಿ ಉದ್ಯಮದ ಕಾಯಕಲ್ಪಕ್ಕಾಗಿ ನವ ಸಂಶೋಧನೆಗಳನ್ನು ಕಾಫಿ ಮಂಡಳಿ ವತಿಯಿಂದ ಕೈಗೊಳ್ಳುವ ಚಿಂತನೆ ನಡೆದಿದೆ. ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಕಾಫಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವಂತೆ ಸರ್ಕಾದ ಗಮನ ಸೆಳೆಯುವುದಾಗಿ ಕಾಫಿ ಮಂಡಳಿಯ ನೂತನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯದರ್ಶಿ ಡಾ.ಕೆ.ಜಿ.ಜಗದೀಶ್ ಭರವಸೆ ನೀಡಿದ್ದಾರೆ.
ಮಡಿಕೇರಿಯಲ್ಲಿ ಸಂಘದ 141 ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಫಿ ಮಂಡಳಿಯ ನೂತನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡು 15 ದಿನಗಳಷ್ಟೇ ಕಳೆದಿದ್ದು ಈ ಅವಧಿಯಲ್ಲಿ ಕಾಫಿ ಕೃಷಿಕರ ಸಮಸ್ಯೆಗಳ ಬಗ್ಗೆ ಸಾಕಷ್ಟು ಮಾಹಿತಿ ತಿಳಿದುಕೊಂಡಿದ್ದೇನೆ. ಸಂಕಷ್ಟದಲ್ಲಿನ ಕಾಫಿ ಬೆಳೆಗಾರರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡಲೇ ಕಾಫಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವ ನಿಟ್ಟಿನಲ್ಲಿ ತಾನು ಸಂತ್ರಸ್ಥ ಬೆಳೆಗಾರರ ಧ್ವನಿಯಾಗಿ ಮನವಿ ಮಾಡುವುದಾಗಿ ಹೇಳಿದರು. ಕಾಫಿ ಉದ್ಯಮದ ಸವಾಲುಗಳೇನು ಎಂಬುದನ್ನು ವಿಳಂಭರಹಿತವಾಗಿ ತಿಳಿದುಕೊಳ್ಳಬೇಕಾದ ಅತ್ಯಗತ್ಯವಿದೆ. ಈ ನಿಟ್ಟಿನಲ್ಲಿ ಕಾಫಿ ಮಂಡಳಿಯು ಆಧುನಿಕ ತಂತ್ರಜ್ಞಾನಗಳ ನೆರವಿನೊಂದಿಗೆ ನವೀನ ವಿಧಾನದ ಸಂಶೋಧನೆ ಕೈಗೊಳ್ಳಲಿದೆ ಎಂದೂ ಜಗದೀಶ್ ಮಾಹಿತಿ ನೀಡಿದರು.
ಕಾಫಿ ಮಂಡಳಿ ಮತ್ತು ದೇಶದಲ್ಲಿನ ವಿವಿಧ ಕಾಫಿ ಪರ ಸಂಘಟನೆಗಳು ಒಂದಾಗಿ ಕಾಫಿ ಕಋಷಿ ಉದ್ಯಮದ ಕಾಯಕಲ್ಪಕ್ಕೆ ಮುಂದಾದಲ್ಲಿ ಖಂಡಿತಾ ವಿಶ್ವದಲ್ಲಿಯೇ ಭಾರತ ಕಾಫಿ ರಫ್ತಿನಲ್ಲಿ ಅಗ್ರಮಾನ್ಯ ದೇಶವಾಗಲಿದೆ ಎಂದೂ ಕೆ.ಜಿ.ಜಗದೀಶ್ ವಿಶ್ವಾಸ ವ್ಯಕ್ತಪಡಿಸಿದರು.
ಬರ ಮತ್ತು ಅತಿವಋಷ್ಟಿಯ ಹೊಡೆತದಿಂದ ಸಂಕಷ್ಟಕ್ಕೊಳಗಾಗಿದ್ದ ಕಾಫಿ ಬೆಳೆಗಾರರು ಇದೀಗ ಕೋರೋನಾ ದಿನಗಳ ಆರ್ಥಿಕ ಸಮಸ್ಯೆಗೂ ಸಿಲುಕಿದ್ದಾರೆ. ವಿವಿಧ ರೋಗಗಳು ಕಾಫಿ ಸಸಿಗಳನ್ನು ಬಾಧಿಸುತ್ತಿದೆ. ಜತೆಗೆ, ಕಾಫಿ ತೋಟ ನಿರ್ವಹಣೆಯೂ ವಿವಿಧ ಕಾರಣಗಳಿಂದಾಗಿ ಕಷ್ಟಸಾಧ್ಯವಾಗಿದೆ ಎಂಬ ವಾಸ್ತವಾಂಶ ತನ್ನ ಗಮನಕ್ಕೆ ಬಂದಿದೆ. ಈ ಎಲ್ಲಾ ಸಮಸ್ಯೆಗಳ ಪರಿಹಾರ ಯಾವುದೇ ಒಂದು ಸಂಸ್ಥೆಯಿಂದ ಖಂಡಿತಾ ಸಾಧ್ಯವಾಗುವುದಿಲ್ಲ. ಹೀಗಾಗಿ ಕಾಫಿ ಬೆಳೆಗಾರರ ವಿವಿಧ ಸಂಘಟನೆಗಳೂ ಒಂದೇ ವೇದಿಕೆಯಡಿ ಒಗ್ಗಟ್ಟಾಗಿ ಸರ್ಕಾರದಿಂದ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗುತ್ತದೆ ಎಂದೂ ಕಾಫಿ ಮಂಡಳಿ ಕಾರ್ಯದರ್ಶಿ ಹೇಳಿದರು.
::: ಸಕಾರಾತ್ಮಕ ಸ್ಪಂದನದ ನಿರೀಕ್ಷೆ ::::
ಸಂಘದ ಅಧ್ಯಕ್ಷ ಶಿರೀಶ್ ವಿಜಯೇಂದ್ರ ಮಾತನಾಡಿ, ಈಗಾಗಲೇ ಬೆಳೆಗಾರರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಕೇಂದ್ರ ವಾಣಿಜ್ಯ ಸಚಿವರ ಗಮನವನ್ನು ಸೆಳೆಯಲಾಗಿದ್ದು ಸಮಗ್ರ ಮಾಹಿತಿಯನ್ನೂ ಸಚಿವರಿಗೆ ನೀಡಲಾಗಿದೆ. ಕಾಫಿ ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ ಮತ್ತು ಕಡಮೆ ಬಡ್ಡಿದರದಲ್ಲಿ ಹೊಸ ಸಾಲ ನೀಡಿಕೆ ನಮ್ಮ ಮುಖ್ಯ ಬೇಡಿಕೆಯಾಗಿದೆ. ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಸ್ಪಂದನ ದೊರಕುವ ವಿಶ್ವಾಸವೂ ನಮಗಿದೆ ಎಂದರು.
ಪ್ರಕೃತಿ ವಿಕೋಪದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ ಕಾಫಿ ಬೆಳೆಗಾರರಿಗೂ ಸೂಕ್ತ ಪರಿಹಾರ ಕೇಂದ್ರ ಸರ್ಕಾರದಿಂದ ದೊರಕಬೇಕು ಎಂಬುದು ತಮ್ಮ ಬೇಡಿಕೆಯಾಗಿದ್ದು, ಮಾನವ ಮತ್ತು ವನ್ಯಜೀವಿ ಸಂಘರ್ಷದ ಸೂಕ್ತ ಪರಿಹಾರವೂ ಆದ್ಯತಾ ಬೇಡಿಕೆಗಳಲ್ಲಿ ಒಂದಾಗಿದೆ ಎಂದು ಶಿರೀಸ್ ವಿಜಯೇಂದ್ರ ಹೇಳಿದರು.
ಮಾನವ- ಕಾಡಾನೆ ಸಂಘರ್ಷ ಕರ್ನಾಟಕದ ವಿವಿಧ ಕಾಫಿ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ಸಾಕಷ್ಟು ಸಾವುನೋವಿಗೆ ಕಾರಣವಾಗಿದ್ದು ಸೂಕ್ತ ಪರಿಹಾರ ಅತ್ಯಂತ ಅಗತ್ಯದ ತೀರ್ಮಾನವಾಗಬೇಕಾಗಿದೆ ಎಂದು ಶಿರೀಶ್ ತಿಳಿಸಿದರು.
ಸಂಘದ ಅಧ್ಯಕ್ಷ ಎಂ.ಸಿ.ಕಾರ್ಯಪ್ಪ ಮಾತನಾಡಿ ಕೊಡಗು ಜಿಲ್ಲೆಯಲ್ಲಿ ಮಹಾಮಳೆ, ಭೂಕುಸಿತದಿಂದ ಸಂಭವಿಸಿದ ದುರಂತದಲ್ಲಿ ಹಲವು ಕಾಫಿ ಬೆಳೆಗಾರರು ಅಪಾರ ನಷ್ಟ ಅನುಭವಿಸಿದ್ದಾರೆ. ಈ ನಿಟ್ಟಿನಲ್ಲಿ ಕೊಡಗಿನ ಕೆಲವು ಪ್ರಮುಖ ಬೆಳೆಗಾರರು ಹೈಕೋರ್ಟ್‍ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಂಘ ಪರೋಕ್ಷವಾಗಿ ಬೆಂಬಲಿಸಿದೆ ಎಂದರು.
ಸಂಘವು ರಾಜ್ಯದ ಇತರ ಬೆಳೆಗಾರರ ಸಂಘಟನೆಗಳೊಂದಿಗೆ ಕಾಫಿ ಉದ್ಯಮದ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದೊಂದಿಗೆ ಸತತ ಸಂಪರ್ಕದಲ್ಲಿದೆ. ನಿಯೋಗ ತೆರಳಿ ಮನವಿಯನ್ನೂ ಸಲ್ಲಿಸಲಾಗಿದೆ ಎಂದು ಹೇಳಿದ ಕಾರ್ಯಪ್ಪ, ಪ್ರಧಾನ ಮಂತ್ರಿಗಳ ಫಸಲು ಭೀಮಾ ಯೋಜನೆಯಡಿಯಲ್ಲಿ ಕಾಫಿ ಉದ್ಯಮವನ್ನೂ ತರಬೇಕು. ಆ ಮೂಲಕ ಕಾಫಿ ಕಋಷಿ ನಷ್ಟಕ್ಕೆ ಸೂಕ್ತ ಪರಿಹಾರ ದೊರಕಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ಒಂದು ಜಿಲ್ಲೆ – ಒಂದು ಉತ್ಪನ್ನಯೋಜನೆಯಡಿ ಕೊಡಗು ಜಿಲ್ಲೆಯಲ್ಲಿ ಕಾಫಿಯನ್ನು ಮಾತ್ರ ಪರಿಗಮಿಸಬೇಕೆಂಬುದು ಸಂಘದ ಒತ್ತಾಸೆಯಾಗಿದ್ದು ಉಪಬೆಳೆಗಳಾದ ಕರಿಮೆಣಸು, ಏಲಕ್ಕಿ, ಕಿತ್ತಳೆ, ಶುಂಠಿ, ಬೆಣ್ಣೆಹಣ್ಣು ಇತ್ಯಾಧಿಗಳನ್ನು ಕಾಫಿಯ ಉಪಬೆಳೆಗಳಾಗಿಯೇ ಪರಿಗಣಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವುದಾಗಿ ಎಂ.ಸಿ.,ಕಾರ್ಯಪ್ಪ ತಿಳಿಸಿದರು.
ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿ ಸಿ.ಕೆ.ಬೆಳ್ಯಪ್ಪ, ಮುಂದಿನ ಸಾಲಿನ ಅಧ್ಯಕ್ಷ ಎನ್.ರಾಮನಾಥನ್ ಹಾಜರಿದ್ದರು, ಎ.ಎ.ಚಂಗಪ್ಪ ನಿರೂಪಿಸಿದರು.



