ಹಂದಿ ಗೂಡಿನ ವಿರುದ್ಧ ಕಾನೂನು ಹೋರಾಟ : ಚೆಟ್ಟಳ್ಳಿ ಸಹಕಾರ ಸಂಘ ಎಚ್ಚರಿಕೆ

October 16, 2020

ಮಡಿಕೇರಿ ಅ.16 : ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಳಿಯಲ್ಲೇ ವ್ಯಕ್ತಿಯೊಬ್ಬರು ನಿಯಮ ಬಾಹಿರವಾಗಿ ಹಂದಿ ಸಾಕಾಣಿಕೆ ನಡೆಸುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಂದಿ ಗೂಡನ್ನು ತಕ್ಷಣ ತೆರವುಗೊಳಿಸಬೇಕೆಂದು ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಂದಿ ಸಾಕಾಣಿಕೆ ವಿರುದ್ಧ ಈಗಾಗಲೇ ಜಿಲ್ಲಾಧಿಕಾರಿಗಳು, ಪೋಲಿಸ್ ವರಿಷ್ಠಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳು, ಗ್ರಾ.ಪಂ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ಸಧ್ಯದಲ್ಲಿಯೇ ತಾ.ಪಂ ಹಾಗೂ ಗ್ರಾ.ಪಂ ಎದುರು ಪ್ರತಿಭಟನೆ ನಡೆಸಿ ಹಂದಿ ಗೂಡು ತೆರವಿಗಾಗಿ ಒತ್ತಾಯಿಸಲಾಗುವುದು. ಇದಕ್ಕೂ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಮಣಿಉತ್ತಪ್ಪ ಎಚ್ಚರಿಕೆ ನೀಡಿದರು.
ಸುಮಾರು 25 ವರ್ಷಗಳ ಹಿಂದೆ ಚೆಟ್ಟಳ್ಳಿ ಸಹಕಾರ ಸಂಘಕ್ಕೆ ಜಾಗವನ್ನು ಮಾರಾಟ ಮಾಡಿದ ವ್ಯಕ್ತಿಯೊಬ್ಬರ ಪುತ್ರ ಇದೀಗ ಸಂಘದ ಸ್ವಾಧೀನದಲ್ಲಿರುವ ಜಾಗವನ್ನು ತಮ್ಮದೆಂದು ವಾದಿಸುತ್ತಿದ್ದಾರೆ. ಅಲ್ಲದೆ ಕಾನೂನು ಹೋರಾಟ ಕೂಡ ನಡೆಸುತ್ತಿದ್ದಾರೆ. ಇದು ಅತ್ಯಂತ ವಿಷಾದಕರ ಬೆಳವಣಿಗೆಯಾಗಿದ್ದು, ಇದೇ ವ್ಯಕ್ತಿ ದುರುದ್ದೇಶದಿಂದ ಸಂಘದ ಕಟ್ಟಡದ ಬಳಿಯೇ ಹಂದಿ ಸಾಕಾಣಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪಟ್ಟಣ ವ್ಯಾಪ್ತಿಯಲ್ಲಿ ಹಂದಿ ಸಾಕಾಣಿಕೆ ಕಾನೂನಿಗೆ ವಿರುದ್ಧವಾಗಿದ್ದರೂ ಸುಮಾರು 15 ರಿಂದ 20 ಹಂದಿಗಳನ್ನು ಸಾಕಲಾಗುತ್ತಿದೆ. ದುರ್ವಾಸನೆಯಿಂದ ಸಾರ್ವಜನಿಕರು ಬೇಸತ್ತಿದ್ದು, ಸಹಕಾರ ಸಂಘದ ಸಿಬ್ಬಂದಿಗಳು ಕೂಡ ಕರ್ತವ್ಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೋವಿಡ್ ಜೊತೆಯಲ್ಲಿ ಹಂದಿ ಜ್ವರವೂ ಬರಬಹುದಾದ ಅನಾರೋಗ್ಯಕರ ಪರಿಸ್ಥಿತಿ ಹಂದಿ ಗೂಡಿನ ಸುತ್ತಮುತ್ತ ಇದೆ. ತಕ್ಷಣ ಜಿಲ್ಲಾಡಳಿತ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಗೂಡನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಮಣಿಉತ್ತಪ್ಪ ಒತ್ತಾಯಿಸಿದರು.
::: ಕಾವೇರಿ ಎಲ್ಲರ ತಾಯಿ :::
ಕೊಡಗಿನ ಆರಾಧ್ಯ ದೇವಿ ಜಲಸ್ವರೂಪಿ ಕಾವೇರಿ ಮಾತೆ ಯಾವುದೋ ಒಂದು ಪಂಗಡಕ್ಕೆ ಸೇರಿದವಳಲ್ಲ, ಬದಲಿಗೆ ಎಲ್ಲರಿಗೂ ಸೇರಿದ ತಾಯಿಯಾಗಿದ್ದಾಳೆ. ಕಾವೇರಿ ತಾಯಿಯನ್ನು ಮುಂದಿಟ್ಟುಕೊಂಡು ಪಂಗಡ, ಜಾತಿವಾರು ಕಚ್ಚಾಡುವುದು ಸರಿಯಲ್ಲವೆಂದು ಮಣಿಉತ್ತಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಾವೇರಿಯ ರೂಪವನ್ನು ನೋಡಿದವರು ಯಾರೂ ಇಲ್ಲ, ಆಕೆ ಜಲ ಮತ್ತು ತೀರ್ಥಸ್ವರೂಪಿಣಿ ಎನ್ನುವುದಂತು ಸತ್ಯ. ಅತ್ಯಂತ ಶಕ್ತಿಶಾಲಿಯಾದ ತಾಯಿ ಕಾವೇರಿಯ ವಿಚಾರದಲ್ಲಿ ಕಲಹ ಏರ್ಪಡುತ್ತಿರುವುದೇ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಅನಾಹುತಗಳಿಗೆ ಕಾರಣವೆಂದು ಅವರು ಅಭಿಪ್ರಾಯಪಟ್ಟರು.
ಸುಮಾರು 25 ವರ್ಷಗಳ ಹಿಂದೆ ಕಾವೇರಿ ಕುಂಡಿಕೆಯಿಂದ ನಾನು ಸಂಗ್ರಹಿಸಿದ ತೀರ್ಥ ಇನ್ನೂ ಕೂಡ ಕೆಡದೆ ಹಾಗೆ ಇದೆ. ಆ ತೀರ್ಥಕ್ಕೆ ಅಷ್ಟು ಶಕ್ತಿ ಇದ್ದು, ಕಲಹದಲ್ಲಿ ತೊಡಗಿರುವವರು ಮೊದಲು ಕಾವೇರಿಯ ಮಹತ್ವವನ್ನು ಅರಿತುಕೊಳ್ಳಲಿ ಎಂದು ಮಣಿಉತ್ತಪ್ಪ ಒತ್ತಾಯಿಸಿದರು.
ತೀರ್ಥೋದ್ಭವದ ದಿನ ಕಾವೇರಿ ಉಕ್ಕುವ ಅಮೂಲ್ಯ ಕ್ಷಣವನ್ನು ಕಣ್ತುಂಬಿಕೊಳ್ಳುವ ಅವಕಾಶ ಭಕ್ತರಿಗೆ ಸಿಗುತ್ತಿತ್ತು. ಆದರೆ ಇಂದು ತೀರ್ಥೋದ್ಭವವನ್ನೇ ನೋಡಲಾಗದ ಪರಿಸ್ಥಿತಿ ಬಂದೊಂದಗಿದೆ. ಇದಕ್ಕೆ ಪ್ರಮುಖ ಕಾರಣ ಕಾವೇರಿ ತಾಯಿಯ ಹೆಸರಿನಲ್ಲಿ ನಡೆಯುತ್ತಿರುವ ವಾದ, ವಿವಾದ, ಕಲಹಗಳು ಮತ್ತು ತೀರ್ಥ ಸ್ವರೂಪಿಣಿಯ ಶಕ್ತಿಯ ಕಡೆಗಣನೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪವಿತ್ರ ಕ್ಷೇತ್ರ ತಲಕಾವೇರಿಯ ವಿಚಾರದಲ್ಲಿ ಸೃಷ್ಟಿಯಾಗಿರುವ ಗೊಂದಲದ ಬಗ್ಗೆ ಹೊರ ಜಿಲ್ಲೆಗಳಲ್ಲೂ ಚರ್ಚೆ ನಡೆಯುತ್ತಿದ್ದು, ಇದು ಉತ್ತಮ ಬೆಳವಣಿಗೆಯಲ್ಲವೆಂದು ತಿಳಿಸಿದ ಮಣಿಉತ್ತಪ್ಪ, ಎಲ್ಲರೂ ಒಗ್ಗಟ್ಟಿನಿಂದ ಜಾತಿ, ಭೇದ ಮರೆತು ಕಾವೇರಿಯ ಶಕ್ತಿಗೆ ತಲೆ ಬಾಗಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಮರದಾಳು ಎಸ್.ಉಲ್ಲಾಸ್, ನಿರ್ದೇಶಕರುಗಳಾದ ಕಣಜಾಲು ಕೆ.ಪೂವಯ್ಯ, ಪೇರಿಯನ ಎಸ್.ಪೂಣಚ್ಚ, ನೂಜಿಬೈಲು ಡಿ.ನಾಣಯ್ಯ ಹಾಗೂ ಟಿ.ಎಸ್.ಧನಂಜಯ ಉಪಸ್ಥಿತರಿದ್ದರು.