ಕಾವೇರಿ ಎಲ್ಲರ ತಾಯಿ, ವಿನಾಕಾರಣ ಕಲಹ ಬೇಡ : ಮಣಿಉತ್ತಪ್ಪ ಅಸಮಾಧಾನ

16/10/2020

ಮಡಿಕೇರಿ ಅ. 16 : ಕೊಡಗಿನ ಆರಾಧ್ಯ ದೇವಿ ಜಲಸ್ವರೂಪಿ ಕಾವೇರಿ ಮಾತೆ ಯಾವುದೋ ಒಂದು ಪಂಗಡಕ್ಕೆ ಸೇರಿದವಳಲ್ಲ, ಬದಲಿಗೆ ಎಲ್ಲರಿಗೂ ಸೇರಿದ ತಾಯಿಯಾಗಿದ್ದಾಳೆ. ಕಾವೇರಿ ತಾಯಿಯನ್ನು ಮುಂದಿಟ್ಟುಕೊಂಡು ಪಂಗಡ, ಜಾತಿವಾರು ಕಚ್ಚಾಡುವುದು ಸರಿಯಲ್ಲವೆಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾವೇರಿಯ ರೂಪವನ್ನು ನೋಡಿದವರು ಯಾರೂ ಇಲ್ಲ, ಆಕೆ ಜಲ ಮತ್ತು ತೀರ್ಥಸ್ವರೂಪಿಣಿ ಎನ್ನುವುದಂತು ಸತ್ಯ. ಅತ್ಯಂತ ಶಕ್ತಿಶಾಲಿಯಾದ ತಾಯಿ ಕಾವೇರಿಯ ವಿಚಾರದಲ್ಲಿ ಕಲಹ ಏರ್ಪಡುತ್ತಿರುವುದೇ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸುತ್ತಿರುವ ಅನಾಹುತಗಳಿಗೆ ಕಾರಣವೆಂದು ಅವರು ಅಭಿಪ್ರಾಯಪಟ್ಟರು.
ಸುಮಾರು 25 ವರ್ಷಗಳ ಹಿಂದೆ ಕಾವೇರಿ ಕುಂಡಿಕೆಯಿಂದ ನಾನು ಸಂಗ್ರಹಿಸಿದ ತೀರ್ಥ ಇನ್ನೂ ಕೂಡ ಕೆಡದೆ ಹಾಗೆ ಇದೆ. ಆ ತೀರ್ಥಕ್ಕೆ ಅಷ್ಟು ಶಕ್ತಿ ಇದ್ದು, ಕಲಹದಲ್ಲಿ ತೊಡಗಿರುವವರು ಮೊದಲು ಕಾವೇರಿಯ ಮಹತ್ವವನ್ನು ಅರಿತುಕೊಳ್ಳಲಿ ಎಂದು ಮಣಿಉತ್ತಪ್ಪ ಒತ್ತಾಯಿಸಿದರು.
ತೀರ್ಥೋದ್ಭವದ ದಿನ ಕಾವೇರಿ ಉಕ್ಕುವ ಅಮೂಲ್ಯ ಕ್ಷಣವನ್ನು ಕಣ್ತುಂಬಿಕೊಳ್ಳುವ ಅವಕಾಶ ಭಕ್ತರಿಗೆ ಸಿಗುತ್ತಿತ್ತು. ಆದರೆ ಇಂದು ತೀರ್ಥೋದ್ಭವವನ್ನೇ ನೋಡಲಾಗದ ಪರಿಸ್ಥಿತಿ ಬಂದೊಂದಗಿದೆ. ಇದಕ್ಕೆ ಪ್ರಮುಖ ಕಾರಣ ಕಾವೇರಿ ತಾಯಿಯ ಹೆಸರಿನಲ್ಲಿ ನಡೆಯುತ್ತಿರುವ ವಾದ, ವಿವಾದ, ಕಲಹಗಳು ಮತ್ತು ತೀರ್ಥ ಸ್ವರೂಪಿಣಿಯ ಶಕ್ತಿಯ ಕಡೆಗಣನೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪವಿತ್ರ ಕ್ಷೇತ್ರ ತಲಕಾವೇರಿಯ ವಿಚಾರದಲ್ಲಿ ಸೃಷ್ಟಿಯಾಗಿರುವ ಗೊಂದಲದ ಬಗ್ಗೆ ಹೊರ ಜಿಲ್ಲೆಗಳಲ್ಲೂ ಚರ್ಚೆ ನಡೆಯುತ್ತಿದ್ದು, ಇದು ಉತ್ತಮ ಬೆಳವಣಿಗೆಯಲ್ಲವೆಂದು ತಿಳಿಸಿದ ಮಣಿಉತ್ತಪ್ಪ, ಎಲ್ಲರೂ ಒಗ್ಗಟ್ಟಿನಿಂದ ಜಾತಿ, ಭೇದ ಮರೆತು ಕಾವೇರಿಯ ಶಕ್ತಿಗೆ ತಲೆ ಬಾಗಬೇಕು ಎಂದು ಮನವಿ ಮಾಡಿದರು.