ಕೋವಿಡ್ ಜಾಗೃತಿ ಅಭಿಯಾನಕ್ಕೆ ಚಾಲನೆ : ಮುನ್ನೆಚ್ಚರಿಕೆ ವಹಿಸಲು ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಸಲಹೆ

16/10/2020

ಮಡಿಕೇರಿ ಅ.16 : ಕೊರೊನಾ ಯಾರಿಗೂ ಕಾಣದ ವೈರಸ್ ಆಗಿದ್ದು, ಈ ವೈರಸ್ ಪ್ರತಿಯೊಬ್ಬರನ್ನೂ ಸದಾ ಕಾಡುತ್ತಿದೆ. ಆದ್ದರಿಂದ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಮಲ್ಲಿಕಾರ್ಜುನ ಗೌಡ ಅವರು ಹೇಳಿದ್ದಾರೆ.
ನಗರದ ಕೋಟೆಯ ನ್ಯಾಯಾಲಯ ಆವರಣದಲ್ಲಿ ಕೋವಿಡ್-19 ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೀವ ಮತ್ತು ಜೀವನ ಇದ್ದಲ್ಲಿ ಮಾತ್ರ ಬದುಕು. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜೀವವನ್ನು ರಕ್ಷಣೆ ಮಾಡಿಕೊಳ್ಳುವತ್ತ ಗಮನಹರಿಸಬೇಕಿದೆ ಎಂದು ನ್ಯಾಯಾಧೀಶರು ಸಲಹೆ ಮಾಡಿದರು.
ಕಾಣದ ವೈರಸ್ ಬರದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಶುಚಿತ್ವ ಕಾಪಾಡುವುದು ಅತಿಮುಖ್ಯ ಎಂದು ಮಲ್ಲಿಕಾರ್ಜುನ ಗೌಡ ಅವರು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಕೊರೊನಾ ವೈರಸ್ ಇಲ್ಲದಂತೆ ಮಾಡಲು ಪ್ರತಿಯೊಬ್ಬರೂ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕಿದೆ. ಆ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಅವರು ಹೇಳಿದರು.
ಅಗತ್ಯವಿದ್ದಾಗ ಮಾತ್ರ ಮನೆಯಿಂದ ಹೊರಬರಬೇಕು ಮತ್ತು ಪ್ರಯಾಣ ಕೈಗೊಳ್ಳಬೇಕು. ಜನ ಸಮೂಹ ಅಥವಾ ಜನ ದಟ್ಟಣೆ ಇರುವ ಕಡೆ ಹೋಗುವುದನ್ನು ಕಡಿಮೆ ಮಾಡಬೇಕು ಎಂದು ಅವರು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸ ಅವರು ಮಾತನಾಡಿ ಜ್ವರ, ಸುಸ್ತು, ಒಣಕೆಮ್ಮು, ಗಂಟಲು ನೋವು ಇತರ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರಲ್ಲಿ ತೋರಿಸಿಕೊಳ್ಳಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡರೆ ಸೋಂಕಿನ ಸಂಖ್ಯೆಯನ್ನು ಗರಿಷ್ಠ 80 ರಷ್ಟು ಕಡಿಮೆ ಮಾಡಬಹುದು ಎಂದು ಅವರು ತಿಳಿಸಿದರು.
ಒಂದನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಪಿ.ಎಸ್.ಚಂದ್ರಶೇಖರ, ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಜಯ ಕುಮಾರ್, ವಕೀಲರ ಸಂಘದ ಅಧ್ಯಕ್ಷರಾದ ಕೆ.ಎಸ್.ಕವನ್, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಭಗಟಿ, ತಾಲ್ಲೂಕು ಕಾರ್ಮಿಕ ಅಧಿಕಾರಿ ಯತ್ನಟ್ಟಿ, ಕಾನೂನು ಸೇವಾಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇತರರು ಇದ್ದರು. ಆಟೋ ಮೂಲಕ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.