ನಿವೇಶನ ಕುರಿತು ಆರೋಪ ಆಧಾರ ರಹಿತ : ವಿದ್ಯಾ ಇಲಾಖಾ ನೌಕರರ ಸಂಘ ಸ್ಪಷ್ಟನೆ

October 16, 2020

ಮಡಿಕೇರಿ ಅ.16 : ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಗೆ ಕಪ್ಪು ಚುಕ್ಕಿ ತರುವ ರೀತಿಯಲ್ಲಿ ನಿವೇಶನದ ವಿಚಾರವನ್ನು ಮುಂದಿಟ್ಟುಕೊಂಡು ಸಂಸ್ಥೆಯ ಕೆಲವು ಸದಸ್ಯರು ಮಾಡುತ್ತಿರುವ ಆರೋಪಗಳು ಖಂಡನೀಯವೆಂದು ತಿಳಿಸಿರುವ ಆಡಳಿತ ಮಂಡಳಿಯ ಅಧ್ಯಕ್ಷ ಡಿ.ಬಿ.ಸೋಮಪ್ಪ, ಆಧಾರ ರಹಿತ ಹೇಳಿಕೆಗಳ ವಿರುದ್ಧ ಕಾನೂನು ರೀತಿಯ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕರರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಹೆಸರನ್ನು ದುರುಪಯೋಗಪಡಿಸಿಕೊಂಡು ಶಿಕ್ಷಕರಿಗೆ ನಿವೇಶನ ಕೊಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕೆಲವರು ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲವೆಂದು ಸ್ಪಷ್ಟಪಡಿಸಿದರು.
ಸಂಸ್ಥೆಯ ನಿರ್ದೇಶಕರಾದ ಹೆಚ್.ಎಲ್.ಚೇತನ್ ಮಾತನಾಡಿ, ಕಳೆದ 2019ರ ಮಾ.23 ರಂದು ಜಿತೀಶ್, ಪ್ರಕಾಶ್, ನಾಗೇಶ್ ಎಂಬವರು ತಾವು ಕೊಪ್ಪ ಸಮೀಪದ ದೊಡ್ಡಹೊನ್ನೂರಿನಲ್ಲಿ ಅಭಿವೃದ್ಧಿ ಪಡಿಸಿದ ನಿವೇಶನದ ದಾಖಲೆಗಳೊಂದಿಗೆ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಯ ಜೊತೆ ಶಿಕ್ಷಕರಿಗೆ ನಿವೇಶನಗಳನ್ನು ಒದಗಿಸುವ ಒಪ್ಪಂದ ಮಾಡಿಕೊಳ್ಳಲು ಮನವಿ ಪತ್ರ ಸಲ್ಲಿಸಿದ್ದರು. ಸದರಿ ನಿವೇಶನವನ್ನು ಸಂಸ್ಥೆಯ ಆಡಳಿತ ಮಂಡಳಿ ವೀಕ್ಷಿಸಿದೆ ಎಂದರು.
2019ರ ಏಪ್ರಿಲ್ 27 ರಂದು ಆಡಳಿತ ಮಂಡಳಿಯ ಸರ್ವ ಸದಸ್ಯರು ಚರ್ಚಿಸಿ, ಸಂಸ್ಥೆಯಿಂದ ಯಾವುದೇ ರೀತಿಯ ಮೂಲ ಬಂಡವಾಳ ಹೂಡದೇ ಸದಸ್ಯರಿಗೆ ಕಡಿಮೆ ದರದಲ್ಲಿ ನಿವೇಶನ ನೀಡುವುದಾದರೆ ನಮ್ಮ ಸಂಸ್ಥೆಯ ಹೆಸರು ಬಳಸಿಕೊಳ್ಳಬಹುದೆಂದು ಅವಕಾಶ ನೀಡಲಾಗಿತ್ತು. ಪ್ರಸ್ತುತ ಕೊಪ್ಪ ಸಮೀಪದ ದೊಡ್ಡಹೊನ್ನೂರಿನಲ್ಲಿ 20 ರಿಂದ 22 ಮಂದಿ ಶಿಕ್ಷಕರು ನಿವೇಶನವನ್ನು ಪಡೆದುಕೊಂಡಿದ್ದು, ಈ ಬಗ್ಗೆ ಸಂಸ್ಥೆಗೆ ಕೃತಜ್ಞತಾ ಪತ್ರವನ್ನು ಸಹ ನೀಡಿದ್ದಾರೆ. ಶಿಕ್ಷಕರಿಗೆ ನಿವೇಶನಗಳನ್ನು ಕಲ್ಪಿಸಿಕೊಡುವುದೇ ನಮ್ಮ ಉದ್ದೇಶವಾಗಿತ್ತು. ಸೆ.22 ರಂದು ನಡೆದ ಸಂಸ್ಥೆಯ ಮಹಾಸಭೆಯಲ್ಲಿ ನಿವೇಶನದ ಬಗ್ಗೆ ಪ್ರಸ್ತಾಪವಾಗಿದ್ದು, ಕೆಲವು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಬಹುತೇಕ ಸದಸ್ಯರು ಸಹಮತ ನೀಡಿದ್ದರು ಎಂದು ಚೇತನ್ ತಿಳಿಸಿದರು.
ಪ್ರಸಕ್ತ ಸಾಲಿನ ಅ.11 ರಂದು ನಡೆದ ಮಹಾಸಭೆಯಲ್ಲಿ ಮತ್ತೆ ಹಿಂದಿನ ಮಹಾಸಭೆಯಲ್ಲಿ ಪ್ರಸ್ತಾಪವಾಗಿದ್ದ ನಿವೇಶನ ವಿಚಾರವನ್ನೆ ಆರು ಮಂದಿ ಸದಸ್ಯರು ವೈಯಕ್ತಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಪ್ರಸ್ತಾಪಿಸಿ ಕಾಲ ಹರಣ ಮಾಡಿದರು. ಆಡಳಿತ ಮಂಡಳಿ ನೀಡಿದ ಸಮಜಾಯಿಷಿಕೆಯನ್ನು ದಿಕ್ಕರಿಸಿ, ಸಂಸ್ಥೆಯ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ಟೀಕಿಸಿದರು.
ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆ 97 ವರ್ಷದ ಇತಿಹಾಸ ಮತ್ತು 2556 ಮಂದಿ ಸದಸ್ಯರನ್ನು ಹೊಂದಿದ್ದು, ಇಂತಹ ಸಂಸ್ಥೆಯ ವಿರುದ್ಧ ದಾಖಲೆಗಳಿಲ್ಲದೆ ಆರೋಪ ಮಾಡಿ, ಕುಂದುಂಟು ಮಾಡುವ ಪ್ರಯತ್ನವನ್ನು ತೀವ್ರವಾಗಿ ವಿರೋಧಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಎ.ವಿ.ಮಂಜುನಾಥ್, ಪುದಿಯನೆರವನ ರೇವತಿ ಹಾಗೂ ಹೆಚ್.ಎನ್.ಮಂಜುನಾಥ್, ಉಪಸ್ಥಿತರಿದ್ದರು.