ಚಾಲಕನ ನಿಯಂತ್ರಣ ತಪ್ಪಿದ ಜೀಪು ಅಪಾಯದಿಂದ ಪಾರು : ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ

16/10/2020

ಮಡಿಕೇರಿ ಅ.16 : ಚಾಲಕನ ನಿಯಂತ್ರಣ ತಪ್ಪಿದ ಜೀಪೊಂದು ಅದೃಷ್ಟವಶಾತ್ ರಸ್ತೆ ಅಂಚಿನಲ್ಲಿ ನಿಂತು ಪ್ರಪಾತಕ್ಕೆ ಬೀಳುವ ಅಪಾಯದಿಂದ ಪಾರಾದ ಘಟನೆ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮಡಿಕೇರಿಯ ರಾಜಾಸೀಟು ಬೆಟ್ಟದ ಕೆಳಗೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, 2018ರಲ್ಲಿ ಸಂಭವಿಸಿದ ಭಾರಿ ಭೂ ಕುಸಿತದಲ್ಲಿ ಹೆದ್ದಾರಿ ಬದಿ ಅಂದಾಜು 100 ಅಡಿಗೂ ಹೆಚ್ಚು ಕುಸಿದು ಬಿದ್ದಿದೆ. ಪ್ರಸ್ತುತ ಸ್ಥಳದಲ್ಲಿ ಮರಳು ಮೂಟೆಗಳನ್ನು ಅಳವಡಿಸಿ ರಸ್ತೆ ಕುಸಿಯದಂತೆ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದ್ದು, ಇದೇ ಸ್ಥಳದ ಮರಳು ಮೂಟೆಯ ಮೇಲೆ ಜೀಪಿನ ಮುಂಭಾಗ ಸರಿದು ನಿಂತಿದೆ. ಜೀಪಿನಲ್ಲಿದ್ದವರ ಪ್ರಾಣ ಉಳಿದ ರೀತಿಯನ್ನು ಕಂಡು ಸಾರ್ವಜನಿಕರು ಆಶ್ಚರ್ಯ ವ್ಯಕ್ತಪಡಿಸಿದರು.
ಘಟನೆ ನಡೆದ ಹೆದ್ದಾರಿಯಲ್ಲಿ ವಾಹನ ದಟ್ಟಣೆಯೂ ಕಂಡು ಬಂತು. ಮಡಿಕೇರಿ ಸಂಚಾರಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಜೀಪಿನ ಹಿಂಬದಿ ಚಕ್ರಗಳು ರಸ್ತೆಯಲ್ಲಿದ್ದ ಸಿಮೆಂಟ್ ಕಟ್ಟೆಗೆ ಸಿಲುಕಿಕೊಂಡ ಹಿನ್ನಲೆಯಲ್ಲಿ ಜೀಪಿನಲ್ಲಿದ್ದವರ ಪ್ರಾಣ ಉಳಿದಿದೆ. ಇಲ್ಲವಾದಲ್ಲಿ ಜೀಪು 500 ಅಡಿಗೂ ಹೆಚ್ಚಿರುವ ಪ್ರಪಾತಕ್ಕೆ ಉರುಳಿ ಬೀಳುವ ಸಾಧ್ಯತೆಗಳಿತ್ತು.