ಸೋಮವಾರಪೇಟೆಯಲ್ಲಿ ಕೋವಿಡ್ ಜಾಗೃತಿ ಜಾಥಕ್ಕೆ ಚಾಲನೆ

17/10/2020

ಮಡಿಕೇರಿ ಅ. 17 : ಸೋಮವಾರಪೇಟೆ ತಾಲ್ಲೂಕು ಕಾನೂನು ಸೇವಾ ಸಮಿತಿ ನೇತೃತ್ವದಲ್ಲಿ, ವಕೀಲರ ಸಂಘ, ತಾಲ್ಲೂಕು ಕಚೇರಿ, ಅರಕ್ಷಕ ಇಲಾಖೆ, ಪಟ್ಟಣ ಪಂಚಾಯಿತಿ, ಆರೋಗ್ಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕೋವಿಡ್ ಜಾಗೃತಿ ಜಾಥಾ ನಡೆಯಿತು.
ಜಾಥಾಕ್ಕೆ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್. ದಿಂಡಲಕೊಪ್ಪ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಕೋರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ಎಚ್ಚೆತ್ತುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸೂಚನೆಯಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಥಾ ನಡೆಸಲಾಗುತ್ತಿದೆ ಎಂದರು.
ಹೆಚ್ಚಿನ ಜನರಲ್ಲಿ ವೈರಸ್ ಹರಡುತ್ತಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಾಯಿಲೆಯನ್ನು ಎಚ್ಚರಿಕೆಯಿಂದ ನಿಯಂತ್ರಿಸಬೇಕು. ಯಾವುದೇ ಲಾಕ್ ಡೌನ್ ಮಾಡುವುದರಿಂದ ನಿಯಂತ್ರಣ ಸಾಧ್ಯವಿಲ್ಲ. ಎಲ್ಲರೂ ಸ್ಯಾನಿಟೈಸ್ ಮತ್ತು ಮಾಸ್ಕ್ ಧರಿಸಬೇಕು. ಜನರ ನಡುವೆ ಕನಿಷ್ಟ 6 ಅಡಿಗಳ ಅಂತರ ಕಾಯ್ದುಕೊಳ್ಳಬೇಕೆಂದರು.
ಇದೇ ಸಂದರ್ಭ ಆಗಮಿಸಿದ್ದವರಿಗೆ ಕಾಯಿಲೆ ನಿಯಂತ್ರಣದ ಮುನ್ನೆಚ್ಚರಿಕೆಯ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
ಈ ಸಂದರ್ಭ ನ್ಯಾಯಾಧೀಶರಾದ ಪ್ರತಿಭಾ, ವಕೀಲರ ಸಂಘದ ಅಧ್ಯಕ್ಷ ತಿಮ್ಮಯ್ಯ, ಪದ್ಮನಾಭ, ವೈದ್ಯರಾದ ಸುಪರ್ಣ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಪೊಲೀಸ್ ಇಲಾಖೆಯ ಠಾಣಾಧಿಕಾರಿ ವಿರೂಪಾಕ್ಷ, ತಾಲ್ಲೂಕು ಪಂಚಾಯಿತಿಯ ರವೀಂದ್ರ ಸೇರಿದಂತೆ ವಕೀಲರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.