ಸಂಪ್ರದಾಯದಂತೆ ತೀರ್ಥೋದ್ಭವದ ವಿಧಿ ವಿಧಾನ ನಡೆದಿದೆ

17/10/2020

ಮಡಿಕೇರಿ ಅ.17 : ಸಂಪ್ರದಾಯದಂತೆ ತೀರ್ಥೋದ್ಭವದ ವಿಧಿ ವಿಧಾನಗಳು ನಡೆದಿದ್ದು, ಕೋವಿಡ್ ಹಿನ್ನೆಲೆ ಜನರ ಆರೋಗ್ಯದ ಹಿತದೃಷ್ಟಿಯಿಂದ ಕೆಲವು ನಿಯಮಗಳನ್ನು ಜಾರಿಗೊಳಿಸಲೇಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ತೀರ್ಥೋದ್ಭವದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕಾಗಿತ್ತು. ಹೀಗಾಗಿ ತಲಕಾವೇರಿ ಕ್ಷೇತ್ರಕ್ಕೆ ಭಕ್ತರಿಗೆ ಮುಕ್ತವಾಗಿ ಪ್ರವೇಶಿಸಲು ಅವಕಾಶ ಇರಲಿಲ್ಲ. ಯಾರಿಗೇ ನೋವಾಗಿದ್ದರೂ ರಾಜ್ಯ ಸರ್ಕಾರದ ಪರವಾಗಿ ಕ್ಷಮೆ ಕೋರುವುದಾಗಿ ಹೇಳಿದರು.
ಪ್ರಸ್ತುತ ಇರುವ ಸಂಕಷ್ಟದ ಪರಿಸ್ಥಿತಿ ಮುಂದಿನ ದಿನಗಳಲ್ಲಿ ನಾಡಿಗೆ ಬಾರದಂತೆ ತಾಯಿ ಕಾವೇರಿಯಲ್ಲಿ ಪ್ರಾರ್ಥಿಸಿದ್ದೇನೆ. ಸಂಪ್ರದಾಯಕ್ಕೆ ಸಣ್ಣ ಅಪಚಾರವೂ ನಡೆಯದಂತೆ ತೀರ್ಥೋದ್ಭವ ನಡೆದಿದೆ ಎಂದು ತಿಳಿಸಿದರು.
ಶಾಸಕ ಅಪ್ಪಚ್ಚು ರಂಜನ್ ಅವರು ಮಾತನಾಡಿ ಎಲ್ಲಾ ಸಂಕಷ್ಟಗಳನ್ನು ನಿವಾರಿಸುವಂತೆ ಮಾತೆ ಕಾವೇರಿಯಲ್ಲಿ ಪ್ರಾರ್ಥಿಸಲಾಯಿತು ಎಂದು ತಿಳಿಸಿದರು.