ಗೋಣಿಕೊಪ್ಪಲಿನಲ್ಲಿ ನವರಾತ್ರಿಯ ಪೂಜಾ ಕಾರ್ಯಕ್ಕೆ ಚಾಲನೆ

17/10/2020

ಮಡಿಕೇರಿ ಅ. 17 : ಗೋಣಿಕೊಪ್ಪಲಿನ 42ನೇ ವರ್ಷದ ದಸರಾ ಆಚರಣೆಯ ಅಂಗವಾಗಿ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಚಾಮುಂಡೇಶ್ವರಿ ದೇವಿಯ ವಿಗ್ರಹ ಪ್ರತಿಷ್ಠಾಪಿಸುವ ಮೂಲಕ ನವರಾತ್ರಿಯ ಪೂಜಾ ಕಾರ್ಯಕ್ಕೆ ಮುಂದಾಗಿದೆ.
ಶನಿವಾರ ಬೆಳಿಗ್ಗೆ 7 ಗಂಟೆಗೆ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನದಲ್ಲಿ ದೇವಿ ಪ್ರತಿಷ್ಠಾಪಿಸುವ ಮೂಲಕ ಶಾಸಕ ಕೆ.ಜಿ. ಬೋಪಯ್ಯ ಅವರು ದೇವಿಗೆ ಪುಷ್ಪಾರ್ಚನೆ ಮಾಡಿ ನವರಾತ್ರಿಯ ಪೂಜಾ ಕಾರ್ಯಕ್ಕೆ ಚಾಲನೆ ನೀಡಿದರು.
ಕೊರೋನ ಆತಂಕದ ನಡುವೆ ಗೋಣಿಕೊಪ್ಪಲು ಶ್ರೀ ಕಾವೇರಿ ದಸರಾ ಸಮಿತಿಯು ಸರಳ ದಸರಾ ಆಚರಣೆಗೆ ಮುಂದಾಗಿದ್ದು, ದಸರಾ ಆಚರಣೆಯು ದೇವಿಯ ಆರಾಧನೆಗಷ್ಟೇ ಸೀಮಿತಿಗೊಳಿಸಿದೆ. ಈ ಹಿನ್ನೆಲೆ ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ 7 ಗಂಟೆಗೆ ವಿಶೇಷವಾಗಿ ದೇವಿ ಪೂಜೆ ನಡೆಸಲಾಗುವುದು. ಉಳಿದಂತೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯದು ಎಂದು ಸಮಿತಿ ಅಧ್ಯಕ್ಷ ಕೆ.ಜಿ. ರಾಮಕೃಷ್ಣ ತಿಳಿಸಿದ್ದಾರೆ.
41 ವರ್ಷಗಳು ನಡೆದ ದಸರಾ ಜನೋತ್ಸವದಲ್ಲಿ ಸ್ಥಳೀಯ ಪ್ರತಿಭೆಗಳ ಕಲಾಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ದಸರಾ ಆಚರಣೆಯ 9 ದಿನಗಳು ನಡೆಯುತ್ತಿದ್ದವು. ಕೊನೆಯ ದಿನ ದಶಮಂಟಪ ಯಾತ್ರೆಯೊಂದಿಗೆ ದಸರಾ ಸಂಪನ್ನಗೊಳ್ಳುತ್ತಿತ್ತು. ಈ ಬಾರಿ ಕೊರೋನ ಆತಂಕದಿಂದ ದಸರಾ ಸರಳವಾಗಿ ಆಚರಣೆಯಾಗುತ್ತಿದ್ದು, ಪೂಜಾ ಕಾರ್ಯಕ್ಕಷ್ಟೆ ಸೀಮಿತಗೊಳಿಸಲಾಗಿದೆ. ಕೊನೆಯ ದಿನ ದೇವಿಯ ಮೂರ್ತಿಯನ್ನು ರಾತ್ರಿ 10 ಗಂಟೆಯೊಳಗೆ ವಿಸರ್ಜಿಸಲಾಗುವುದು ಎಂದು ಗೌರವಾಧ್ಯಕ್ಷ ಕೆ.ಪಿ. ಬೋಪಣ್ಣ ಮಾಹಿತಿ ನೀಡಿದ್ದಾರೆ.
ಪೂಜಾ ಕಾರ್ಯದಲ್ಲಿ ಅಕ್ರಮ ಸಕ್ರಮ ಸಮಿತಿಯ ತಾಲ್ಲೂಕು ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಗ್ರಾ.ಪಂ. ಉಪಾಧ್ಯಕ್ಷೆ ಕಾವ್ಯ, ಸದಸ್ಯರುಗಳಾದ ರತಿ ಅಚ್ಚಪ್ಪ, ಮಂಜುಳ, ಪ್ರಭಾವತಿ, ಸುರೇಶ್ ರೈ, ರಾಜಶೇಖರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಹಿರಿಯ ಸ್ಥಾಪಕರ ಸದಸ್ಯರಾದ ರಾಮಚಾರ್, ಪೂಜಾ ಸಮಿತಿಯ ಅಧ್ಯಕ್ಷ ಡಾ. ಶಿವಪ್ಪ, ವಿಗ್ರಹ ಧಾನಿಗಳಾದ ಕೇಶವ ಕಾಮತ್, ಚಂದನ್ ಕಾಮತ್, ಶ್ರೀ. ಕಾವೇರಿ ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಜಿಮ್ಮ ಸುಬ್ಬಯ್ಯ, ಸದಸ್ಯರುಗಳಾದ ಕುಲ್ಲಚಂಡ ಚಿಣ್ಣಪ್ಪ, ರಮೇಶ್, ಧನಲಕ್ಷ್ಮಿ ಸೇರಿದಂತೆ ಕೆಲವು ಪ್ರಮುಖರಿದ್ದರು.