ಕರಗೋತ್ಸವದ ಮೂಲಕ ಮಡಿಕೇರಿ ದಸರಾಕ್ಕೆ ಚಾಲನೆ

17/10/2020

ಮಡಿಕೇರಿ ಅ.17 : ಕೋವಿಡ್ ಸಂಕಷ್ಟ ಮತ್ತು ಅತಿವೃಷ್ಟಿ ಹಾನಿಯ ನಡುವೆ ಐತಿಹಾಸಿಕ ಮಡಿಕೇರಿ ದಸರಾಕ್ಕೆ ಕರಗೋತ್ಸವದ ಮೂಲಕ ಚಾಲನೆ ನೀಡಲಾಗಿದೆ.
ನಗರದ ನಾಲ್ಕು ಶಕ್ತಿ ದೇವತೆಗಳಾದ ಶ್ರೀಕುಂದುರುಮೊಟ್ಟೆ ಚೌಟಿ ಮಾರಿಯಮ್ಮ, ಶ್ರೀಕಂಚಿಕಾಮಾಕ್ಷಿಯಮ್ಮ, ಶ್ರೀದಂಡಿನ ಮಾರಿಯಮ್ಮ ಹಾಗೂ ಶ್ರೀಕೋಟೆ ಮಾರಿಯಮ್ಮ ದೇವಾಲಯಗಳ ಕರಗಗಳಿಗೆ ಪಂಪಿನ ಕೆರೆ ಬಳಿ ಸಾಂಪ್ರದಾಯಿಕ ಪೂಜೆ, ವಿಧಿ ವಿಧಾನಗಳನ್ನು ನೆರವೇರಿಸುವುದರೊಂದಿಗೆ ನವರಾತ್ರಿಯ ದೇವಿ ಪೂಜೆಗೆ ಮಳೆಯ ಸಿಂಚನದ ನಡುವೆ ಚಾಲನೆ ನೀಡಲಾಯಿತು.
ಕರಗಗಳು ಪಂಪಿನಕೆರೆಯಿಂದ ಬನ್ನಿ ಮಂಟಪ, ಶ್ರೀಕೋದಂಡರಾಮ ದೇವಾಲಯ, ಶ್ರೀಚೌಡೇಶ್ವರಿ ದೇವಾಲಯ, ಶ್ರೀಕನ್ನಿಕಾ ಪರಮೇಶ್ವರಿ ದೇವಾಲಯ ಹಾಗೂ ಇತಿಹಾಸ ಪ್ರಸಿದ್ಧ ಪೇಟೆ ಶ್ರೀರಾಮಮಂದಿರ ದೇವಾಲಯಗಳಲ್ಲಿ ಪೂಜೆಯನ್ನು ಸ್ವೀಕರಿಸಿದವು. ನಂತರ ತಮ್ಮ ತಮ್ಮ ದೇವಾಲಯಗಳಿಗೆ ತೆರಳಿದವು.
ನಾಲ್ಕು ಕರಗಗಳು ನಗರ ಸಂಚಾರವನ್ನು ಸಾಂಕೇತಿಕವಾಗಿ ಆರಂಭಿಸಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಮನೆ ಪೂಜೆಗೆ ತೆರಳುತ್ತಿಲ್ಲ. ವಿಜಯದಶಮಿಯ ದಿನವಾದ ಅ.26 ರಂದು ಮಧ್ಯ ರಾತ್ರಿ ಬನ್ನಿ ಕಡಿಯುವುದರೊಂದಿಗೆ ದಸರಾ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತದೆ. ಎರಡು ದಿನಗಳಿಗೆ ಮಾತ್ರ ಕರಗಗಳ ಸಂಚಾರವನ್ನು ಸೀಮಿತಗೊಳಿಸಲಾಗಿದ್ದು, ನವರಾತ್ರಿಯ ಒಂಭತ್ತು ದಿನಗಳಲ್ಲಿ ನಾಲ್ಕು ಶಕ್ತಿ ದೇವಾಲಯಗಳಲ್ಲಿ ಕರಗಗಳಿಗೆ ವಿಶೇಷ ಪೂಜೆಗಳು ಎಂದಿನಂತೆ ನಡೆಯಲಿದೆ.
ಕರಗೋತ್ಸವಕ್ಕೆ ಚಾಲನೆ ನೀಡುವ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಮತ್ತಿತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹಾಜರಿದ್ದರು.