ಅರಂತೋಡಿನಲ್ಲಿ ಶಿಬಿರ ಸಮಾರೋಪ : ಸ್ವಯಂ ಉದ್ಯೋಗದಿಂದ ಬದುಕು ಕಟ್ಟಿಕೊಳ್ಳಿ : ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಕರೆ

18/10/2020

ಮಡಿಕೇರಿ ಅ.18 : ಕೃಷಿ ಮತ್ತು ಸ್ವಯಂ ಉದ್ಯೋಗದ ಮೂಲಕ ಸುಂದರವಾದ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಗ್ರಾಮ ವಿಕಾಸ ಸಮಿತಿ ಮಂಗಳೂರು, ವಿವೇಕಾನಂದ ವಿದ್ಯಾವರ್ದಕ ಸಂಘ ಪುತ್ತೂರು, ಸಹಕಾರ ಭಾರತಿ ದ.ಕ ಜಿಲ್ಲೆ ಹಾಗೂ ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡು ಇದರ ಸಹಯೋಗದಲ್ಲಿ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಲವು ರೀತಿಯ ಸ್ವಯಂ ಉದ್ಯೋಗ ಅಥವಾ ಸ್ವತಃ ಕೃಷಿ ಮಾಡಿಕೊಂಡು ತನ್ನ ಕಾಲಮೇಲೆ ತಾನು ನಿಲ್ಲುವ ಆತ್ಮಸ್ಥೈರ್ಯವನ್ನು ಯುವ ಸಮೂಹ ರೂಪಿಸಿಕೊಳ್ಳಬೇಕು. ಜೀವನವನ್ನು ಸಾರ್ಥಕಗೊಳಿಸಿಕೊಳ್ಳಲು ಉದ್ಯೋಗ ನೈಪುಣ್ಯ ಕಾರ್ಯ ಅಗತ್ಯವಾಗಿದೆ. ಯಾವ ರೀತಿ ಕೆಲಸ ಮಾಡಬೇಕು, ಯಾವ ರೀತಿ ಬದುಕು ಕಟ್ಟಿಕೋಳ್ಳಬೇಕು ಎನ್ನುವ ಬಗೆಗಿನ ಸುದೀರ್ಘ ಚಿಂತನೆ ನಡೆಸಿದಾಗ ಯಶಸ್ಸು ಸಾಧ್ಯ ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ದಕ್ಷಿಣ ಪ್ರಾಂತ ಗೋಸೇವಾ ಪ್ರಮುಖ್ ಪ್ರವೀಣ್ ಸರಳಾಯ, ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ತಾಲ್ಲೂಕು ಉಪಾಧ್ಯಕ್ಷೆ ಪುಷ್ಪ ಮೇದಪ್ಪ, ರಾಷ್ಟ್ರೀಯ ಸ್ವಯಂ ಸಂಘ ಚಾಲಕ ಚಂದ್ರಶೇಖರ ತಳೂರು, ಪುತ್ತೂರು ವಿವೇಕಾನಂದ ವಿದ್ಯಾಲಯದ ಪ್ರಾಂಶುಪಾಲ ಗೋಪಿನಾಥ್ ಶೆಟ್ಟಿ, ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಸಂಚಾಲಕ ಕೆ.ಆರ್.ಗಂಗಾಧರ್, ಗ್ರಾಮ ವಿಕಾಸ ಸಮಿತಿ ಮಂಗಳೂರು ಸಂಯೋಜಕ ವಿನೋದ್ ಬೋಳ್ಮಲೆ, ಸುಳ್ಯ ತಾಲ್ಲೂಕು ಸಹಕಾರಿ ಭಾರತಿ ಅಧ್ಯಕ್ಷ ಪ್ರವೀಣ್ ಸರಳಾಯ, ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ರಮೇಶ್, ಅರಂತೋಡು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಿವಾನಂದ ಕುಕ್ಕುಂಬಳ,ಮುಖ್ಯ ಶಿಕ್ಷಕ ಸೀತಾರಾಮ ಉಪಸ್ಥಿತರಿದ್ದರು.
ಸುಳ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಸ್ವಾಗತಿಸಿ, ಉಮಾಶಂಕರ್ ವಂದಿಸಿ ಅರಂತೋಡು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಎನ್.ಜಯಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.