ಪೌತಿ, ವಾರಸಾ ಖಾತೆ ಆಂದೋಲನ ನಡೆಸಲು ಸರ್ಕಾರ ಮಾರ್ಗಸೂಚಿ ಪ್ರಕಟ

19/10/2020

ಮಡಿಕೇರಿ ಅ.19 : ರೈತಾಪಿ ವರ್ಗದವರ ಸಮಸ್ಯೆಗಳನ್ನು ಪರಿಹರಿಸಿ ಪೌತಿ, ವಾರಸಾ ಸ್ವರೂಪದ ಮ್ಯುಟೇಶನ್ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಿ ಪೌತಿ, ವಾರಸಾ ಖಾತೆ ಆಂದೋಲನವನ್ನು ನಡೆಸಲು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ/ ವಾರಸ ರೀತ್ಯಾ ಮಾಲೀಕತ್ವವು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ ಅಂತಹ ಜಮೀನುಗಳ ಸ್ವಾಧೀನವನ್ನು ಹೊಂದಿದ್ದರೂ ಸಹ ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿಪಡಿಸಲು ಸಾಲ ಸೌಕರ್ಯಗಳು ದೊರೆಯುವುದಿಲ್ಲ.
ಪ್ರಕೃತಿ ವಿಕೋಪದಂತಹ ಅಚಾತುರ್ಯಗಳಿಂದಾಗಿ ಫಸಲು ನಾಶವಾದಾಗ ಸರ್ಕಾರದಿಂದ ನೀಡಲಾಗುವ ವಿಮೆ, ಪರಿಹಾರದ ಮೊಬಲಗನ್ನು ಪಡೆಯುವುದು ದುಸ್ತರವಾಗುತ್ತದೆ. ಅಲ್ಲದೇ ಇಂತಹ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕೆ ಭೂಸ್ವಾಧೀನ ಕಾಯಿದೆಯಂತೆ ವಶಪಡಿಸಿಕೊಂಡಾಗಲೂ ಸಹ ಪರಿಹಾರದ ಹಣವನ್ನು ಪಡೆಯಲು ವಿವಿಧ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇರುವುದನ್ನು ಗಮನಿಸಿ ಸರ್ಕಾರ ಮಾರ್ಗಸೂಚಿಸಿ ಹೊರಡಿಸಿದೆ.
ಮಾರ್ಗಸೂಚಿ ಇಂತಿದೆ:-ಗ್ರಾಮ ಲೆಕ್ಕಿಗರು ಮರಣ ಹೊಂದಿದ ಖಾತೆದಾರರುಗಳ ವಿವರಗಳನ್ನು ಮರಣ ನೋಂದಣಿ ರಿಜಿಸ್ಟ್ರಾರ್, ಪರಿಹಾರ ತಂತ್ರಾಂಶ (ಪ್ರಸ್ತುತ ಪೌತಿ ವಾರಸುದಾರರ ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಭೂಮಿ ಪರಿಹಾರ ತಂತ್ರಾಂಶದದಲ್ಲಿ ಲಭ್ಯವಿರುವ ಸುಮಾರು 2.71 ಲಕ್ಷ ಪ್ರಕರಣಗಳ ಪಟ್ಟಿಯನ್ನು ಸಂಬಂಧಪಟ್ಟ ತಹಶೀಲ್ದಾರರುಗಳಿಗೆ ಕಳುಹಿಸಲಾಗುವುದು. ಮನೆಮನೆಗಳನ್ನು ಸಂದರ್ಶಿಸುವ ಮುಖೇನ ಪಡೆಯಬಹುದಾಗಿದೆ.
ಮರಣ ಪ್ರಮಾಣ ಪತ್ರ ಹಾಗೂ ವಂಶವೃಕ್ಷವನ್ನು ಮೃತಪಟ್ಟಿರುವ ಕುಟುಂಬದವರಿಂದ ಪಡೆದು ಭೂಮಿ ತಂತ್ರಾಂಶದಲ್ಲಿ ಪೌತಿ ಖಾತೆಗಾಗಿ ನಮೂನೆ-1 ರಲ್ಲಿ ಅರ್ಜಿಯನ್ನು ದಾಖಲಿಸಲು ಕ್ರಮವಹಿಸಬೇಕು. ಇದಕ್ಕಾಗಿ ಭೂಮಿ ತಂತ್ರಾಂಶದಲ್ಲಿ ಗ್ರಾಮಲೆಕ್ಕಿಗರ ಲಾಗಿನ್‍ನಲ್ಲಿ ಪಿಕೆಎ (ಪೌತಿ ಖಾತೆ ಆಂದೋಲನ) ಅರ್ಜಿ ಸ್ವೀಕರಿಸಲು ವ್ಯವಸ್ಥೆ ಮಾಡಲಾಗುವುದು.
ಒಂದು ವೇಳೆ ವಂಶವೃಕ್ಷ ಲಭ್ಯವಿಲ್ಲದ್ದಿದ್ದರೆ ಅರ್ಜಿದಾರರು ಕುಟುಂಬದ ಮಾಹಿತಿಯನ್ನು ನೋಟರಿಯವರ ಸಮಕ್ಷಮ ಸಹಿ ಮಾಡಿ, ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಮನವಿ ದಾಖಲಿಸಿ, ವಂಶವೃಕ್ಷ ಪಡೆಯಬಹುದಾಗಿದೆ. ಹೀಗೆ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ನೋಂದಾಯಿಸಲಾದ ವಂಶವೃಕ್ಷದ ಮೇರೆಗೆ ಗ್ರಾಮಲೆಕ್ಕಿಗರು ಪೌತಿ, ವಾರಸಾ ವಿವರಗಳನ್ನು ದಾಖಲಿಸಲು ಅವಕಾಶವಿರುತ್ತದೆ.
ಒಂದು ವೇಳೆ ಭೂ ಮಾಲೀಕರು ಮರಣವಾಗಿ ಒಂದು ವರ್ಷ ಮೀರಿದ್ದರೂ, ಮರಣ ನೋಂದಣಿಯಾಗದಿದ್ದಲ್ಲಿ ಸಂಬಂಧಪಟ್ಟ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಮರಣದ ಕುರಿತು ಆದೇಶ ಪಡೆದು, ಮರಣ ಪತ್ರವನ್ನು ತಹಶೀಲ್ದಾರ್ ಅವರ ಕಾರ್ಯಾಲಯದಲ್ಲಿ ಪಡೆಯತಕ್ಕದ್ದು, ನಂತರ ಪೌತಿ ಖಾತೆ ಮಾಡಿಸಿಕೊಳ್ಳಲು ಅರ್ಜಿ ದಾಖಲಿಸಬಹುದಾಗಿದೆ.
ಅಥವಾ ಆಧಾರ್ ಮತ್ತು ಪಡಿತರಚೀಟಿ ದಾಖಲೆಗಳನ್ನು ಪರಿಶೀಲಿಸಿಕೊಂಡು ಗ್ರಾಮಲೆಕ್ಕಿಗರು ಮತ್ತು ರಾಜಸ್ವ ನಿರೀಕ್ಷಕರು ಸ್ಥಳ ತನಿಖೆ, ಮಹಜರ್ ಮಾಡಿ ಮೃತ ಖಾತೆದಾರರು ಮರಣ ಹೊಂದಿರುವ ಬಗ್ಗೆ ಸಂಬಂಧಪಟ್ಟ ವಾರಸುದಾರರಿಂದ ಅಫಿಡವಿಟ್ ಅನ್ನು ಪಡೆದು ಅವರುಗಳ ಪಡಿತರ ಚೀಟಿ ಮತ್ತು ಆಧಾರ್ ದಾಖಲೆಯೊಂದಿಗೆ ಪೌತಿ ಖಾತೆ ಮಾಡಿಸಿಕೊಳ್ಳಲು ಅರ್ಜಿ ದಾಖಲಿಸಬಹುದು.
ಈ ಎಲ್ಲಾ ಮನವಿಗಳ ಕುರಿತು ಮ್ಯುಟೇಶನ್ ಫೀ ರೂ.35 ಗಳಿಗೆ ವಿನಾಯಿತಿ ನೀಡಿದೆ. ಸಂಬಂಧಪಟ್ಟವರಿಂದ ಅರ್ಜಿ ಪಡೆದು ದಾಖಲಿಸಿ, ಸ್ವೀಕೃತಿಯನ್ನು ಅರ್ಜಿದಾರರಿಗೆ ಗ್ರಾಮಲೆಕ್ಕಿಗರು ತಲುಪಿಸಬೇಕು ಅಥವಾ ಸೂಕ್ತವಾಗಿ ಭರ್ತಿ ಮಾಡಿ, ಸಹಿ ಮಾಡಲ್ಪಟ್ಟ ಅರ್ಜಿಗಳನ್ನು (ನಮೂನೆ-1 ರಂತೆ ) ಸಂಬಂಧಪಟ್ಟ ನಾಡಕಚೇರಿಗಳಲ್ಲಿ ಅರ್ಜಿದಾರರು ದಾಖಲಿಸಲೂಬಹುದು.
ಹೀಗೆ ಸ್ವೀಕರಿಸಲ್ಪಟ್ಟ ಮನವಿಗಳ ಕುರಿತು ಹಕ್ಕು ಬದಲಾವಣೆಯ ಪ್ರಕರಣಗಳಲ್ಲಿ ನಮೂನೆ-12 ಮತ್ತು ನಮೂನೆ-21 ಗಳನ್ನು ಹೊರಡಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ಮ್ಯುಟೇಶನ್ ವಿಲೇವಾರಿಗೆ 30 ದಿನಗಳ ಕಾಲಾವಕಾಶ ಇರುತ್ತದೆ. ಇಂತಹ ಪ್ರಕರಣಗಳಲ್ಲಿ ಆಸಕ್ತರು ತಕರಾರುಗಳನ್ನೂ ಸಲ್ಲಿಸಬಹುದು. ತಕರಾರುಗಳು ಬಂದರೆ, ವಹಿವಾಟು ವಿವಾದಾಸ್ಪದ ಪ್ರಕರಣಗಳ ಪಟ್ಟಿಗೆ ಸೇರಿಸಲ್ಪಡುತ್ತದೆ. ಈ ಆಂದೋಲನದಲ್ಲಿ ಸ್ವೀಕೃತವಾಗುವ ತಕರಾರುಗಳನ್ನು ಖುದ್ದಾಗಿ ತಹಶೀಲ್ದಾರ್ ಗ್ರೇಡ್-1 (ಕಸಬಾ ಹೋಬಳಿಗಳಿಗೆ) ತಹಶೀಲ್ದಾರರ ಗ್ರೇಡ್-2(ಇತರೆ ಹೋಬಳಿಗಳಿಗೆ) ಒಂದು ತಿಂಗಳೊಳಗೆ ಆಯಾಯ ಹೋಬಳಿಗಳಲ್ಲೇ ಕ್ಯಾಂಪ್ ಮಾಡುವ ಮುಖಾಂತರ ವಿಲೇ ಮಾಡಲು ಕ್ರಮಕೈಗೊಳ್ಳುವುದು. ತಕರಾರುಗಳಿಲ್ಲದ ಪ್ರಕರಣಗಳಲ್ಲಿ ಮ್ಯುಟೇಶನ್ ವಹಿವಾಟುಗಳಲ್ಲಿ ರಾಜಸ್ವ ನಿರೀಕ್ಷಕರು ಅನುಮೋದಿಸಿದ ನಂತರ ಪಹಣಿಗಳಲ್ಲಿ ಹೊಸ ಸ್ವಾಧೀನದಾರರ ಹೆಸರು ಮತ್ತು ವಿಸ್ತೀರ್ಣ ಇತ್ಯಾದಿಗಳು ಕಾಲೋಚಿತಗೊಳ್ಳುತ್ತವೆ. ಪೌತಿ ಖಾತೆ ಆದೇಶ ನಮೂನೆ-2 ರನ್ವಯ ಹೊರಡಿಸತಕ್ಕದ್ದು.
ಮೃತ ಸ್ವಾಧೀನದಾರರು ಹೊಂದಿದ್ದ ಜಮೀನಿನ ಪೂರ್ಣ ವಿಸ್ತೀರ್ಣವನ್ನು ವಂಶವೃಕ್ಷದಲ್ಲಿ ಹೆಸರು ಹೊಂದಿರುವ ಎಲ್ಲಾ ವ್ಯಕ್ತಿಗಳ ಹೆಸರಿಗೆ ಜಂಟಿಯಾಗಿ ದಾಖಲಿಸುವುದರಿಂದ ಯಾವುದೇ ವ್ಯಕ್ತಿಯ ಹಕ್ಕುಗಳನ್ನು ಮೊಟಕುಗೊಳಿಸುವ ಅಥವಾ ಅಲ್ಲ ಗಳೆಯುವ ಸಂಭವ ಇರುವುದಿಲ್ಲ. ಹೀಗೆ ಜಂಟಿಯಾಗಿ ಕಾಲೋಚಿತಗೊಂಡಿರುವ ಹಕ್ಕು ದಾಖಲೆಗಳನ್ನು ಮುಂದೆ ಕುಟುಂಬದ ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ಪಡೆಯಬಹುದಾದ ಪಾಲುಪಟ್ಟಿಯ ಮೇರೆಗೆ ಆಸ್ತಿವಿಭಾಗದ ಮ್ಯುಟೇಶನ್ ನಡೆಸಲು ಅವಕಾಶವಿರುತ್ತದೆ. ಅಥವಾ
ಬಹು ವಾರಸುದಾರರುಗಳು ಇರುವಂತಹ ಪ್ರಕರಣಗಳಲ್ಲಿ ಎಲ್ಲಾ ಉತ್ತರಾಧಿಕಾರಿಗಳು ಯಾರಾದರೂ ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚಿನವರ ಹೆಸರಿನಲ್ಲಿ ಖಾತೆ ಮಾಡಲು ಪ್ರತಿಯೊಬ್ಬರೂ ಪ್ರತ್ಯೇಕವಾಗಿ ಅಫಿಡವಿಟ್ ಮೂಲಕ ಪ್ರಮಾಣೀಕರಿಸಿದಲ್ಲಿ ಅಫಿಡವಿಟ್‍ನಲ್ಲಿ ಖಾತೆ ಮಾಡಲು ಒಪ್ಪಿರುವವರ ಹೆಸರಿಗೆ ಮಾತ್ರವೇ ಮ್ಯುಟೇಶನ್ ಮಾಡಬಹುದಾಗಿದೆ.
ಈ ರೀತಿಯಾಗಿ ಮೃತರಾದ ಭೂಮಾಲೀಕರ ಹೆಸರನ್ನು ತೆಗೆದು ವಂಶವೃಕ್ಷದಲ್ಲಿರುವ ಎಲ್ಲಾ ವ್ಯಕ್ತಿಗಳ ಹೆಸರಿಗೆ ಮಾಲೀಕತ್ವವನ್ನು ಜಂಟಿಯಾಗಿ ಖಾತೆ ಮಾಡುವುದರಿಂದ ಮ್ಯುಟೇಶನ್ ಪೂರ್ವ ನಕ್ಷೆಯ ಅಗತ್ಯವಿರುವುದಿಲ್ಲ.
ತಹಶೀಲ್ದಾರರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಲಕಾಲಕ್ಕೆ ಪೌತಿ, ವಾರಸಾ ವಹಿವಾಟುಗಳ ಆಂದೋಲನದ ನೇತೃತ್ವ ವಹಿಸುವುದು.
ಈ ಯೋಜನೆಯ ಅನುಷ್ಠಾನವನ್ನು ಎಲ್ಲಾ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ಅವರು ಅವಲೋಕಿಸುವುದಲ್ಲದೆ ಕಾರ್ಯಕ್ರಮದ ಯಶಸ್ಸನ್ನು ವಿಮರ್ಶೆ ಮಾಡುವುದು. ಈ ಪ್ರಕ್ರಿಯೆಯು ಕಂದಾಯ ಇಲಾಖೆಯ ನಿರಂತರ ಕ್ರಿಯಾಯೋಜನೆಯಾಗಿದ್ದು, ಈ ಯೋಜನೆಯ ಅನುಷ್ಠಾನ ಮತ್ತು ಪ್ರಗತಿಯನ್ನು ನಿರ್ದೇಶಕರು(ಭೂಮಿ ಮತ್ತು ಯುಪಿಒಆರ್) ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಾಲ ಕಾಲಕ್ಕೆ ಪುನರ್ವಿಮರ್ಶೆ ಮಾಡುವರು ಎಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕಮಲ ಜಯರಾಂ ಅವರು ತಿಳಿಸಿದ್ದಾರೆ.