ಸೋಮವಾರಪೇಟೆ ಪ.ಪಂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆಗೆ ತಡೆ

October 19, 2020

ಮಡಿಕೇರಿ : ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ರಾಜ್ಯ ಉಚ್ಚ ನ್ಯಾಯಾಲಯ ಸೋಮವಾರ ತಡೆಯಾಜ್ಞೆ ನೀಡಿದೆ.
ಪಟ್ಟಣ ಪಂಚಾಯಿತಿಗೆ ಮೀಸಲಾತಿ ಸಮರ್ಪಕವಾಗಿಲ್ಲ. ಬಹುಮತ ಇರುವ ಪಕ್ಷವನ್ನು ಆಡಳಿತದಿಂದ ದೂರ ಇಡುವ ದೃಷ್ಟಿಯಿಂದ ಮೀಸಲಾತಿ ಮಾಡಲಾಗಿದೆ. ಮಾರ್ಗಸೂಚಿಯನ್ನು ಸಮರ್ಪಕವಾಗಿ ಪಾಲಿಸಿಲ್ಲ. ದುರುದ್ಧೇಶದಿಂದ ಮಾಡಲಾಗಿದೆ. ಆದುದರಿಂದ, ಈಗಿನ ಮೀಸಲಾತಿಯನ್ನು ರದ್ದುಪಡಿಸಬೇಕೆಂದು ಪಟ್ಟಣ ಪಂಚಾಯಿತಿ ಸದಸ್ಯೆ ಜಯಂತಿ ಶಿವಕುಮಾರ್ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರವಾಗಿ ಪ್ರತೀಕ್ ಚಂದ್ರಮೌಳಿ ಮತ್ತು ಪೊನ್ನಣ್ಣ ವಾದಿಸಿದರು. ಸರ್ಕಾರಕ್ಕೆ ಮೀಸಲಾತಿ ನಿಗದಿಪಡಿಸುವಂತೆಹ ಅಧಿಕಾರ ಇದೆ. ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಕಲ್ಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮೀಸಲಾತಿ ಪ್ರಕಟಿಸಿದೆ ಎಂದು ಸರ್ಕಾರಿ ಅಭಿಯೋÀಜಕರಾದ ಪ್ರಭುಲಿಂಗ ನಾವಡಗಿ ಸರ್ಕಾರದ ಪರವಾಗಿ ವಾದಿಸಿದರು. ಇಬ್ಬರ ವಾದವನ್ನು ಆಲಿಸಿದ ನ್ಯಾಯಾಧೀಶರು ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಅ.21 ಮುಂದೂಡಿದ್ದಾರೆ.
ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟಕ್ಕೆ ಬಹುಮತ ಬಂದಿದ್ದು, ಕಾಂಗ್ರೆಸ್ 4, ಜೆಡಿಎಸ್ 3, ಬಿಜೆಪಿ 3 ಹಾಗೂ ಪಕ್ಷೇತರ ಒಬ್ಬರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಪರಿಶಿಷ್ಟಜಾತಿಗೆ ಹಾಗು ಉಪಾಧ್ಯಕ್ಷ ಸ್ಥಾನ ಬಿಸಿಎಂ(ಎ) ಮೀಸಲಾಗಿದ್ದು, ಬಹುಮತ ಪಡೆದ ಮೈತ್ರಿಯಲ್ಲಿ ಪರಿಶಿಷ್ಟಜಾತಿಗೆ ಸೇರಿದ ಸದಸ್ಯರು ಆಯ್ಕೆಯಾಗಿಲ್ಲದ ಕಾರಣ, ಸರ್ಕಾರ ಬಿಜೆಪಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪರಿಶಿಷ್ಟ ಜಾತಿಗೆ ಮೀಸಲಾತಿ ನಿಗದಿ ಮಾಡಿದೆ ಎಂದು ಕಾಂಗ್ರೆಸ್ ಜೆಡಿಎಸ್ ಆರೋಪವಾಗಿದೆ. ಬಿಜೆಪಿಯಲ್ಲಿ ಗೆದ್ದ ಮೂವರಲ್ಲಿ ಇಬ್ಬರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ನಳಿನಿಗಣೇಶ್ ಹಾಗು ಪಿ.ಕೆ.ಚಂದ್ರು ಅಧ್ಯಕ್ಷ ಸ್ಥಾನದ ಅಕಾಂಕ್ಷಿಗಳಾಗಿದ್ದಾರೆ. ಮಂಗಳವಾರ ಅವಿರೋಧ ಆಯ್ಕೆಗೆ ಬಿಜೆಪಿ ಸಿದ್ದವಾಗಿತ್ತು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮೈತ್ರಿ ಪಕ್ಷ ಸಿದ್ದತೆ ಮಾಡಿಕೊಂಡಿತ್ತು.

error: Content is protected !!