ಪರಿಹಾರ ಒದಗಿಸುವ ಭರವಸೆ ನೀಡಿದ ಪ್ರಧಾನಿ

20/10/2020

ಮೈಸೂರು ಅ.20 : ನೆರೆ ಬಾಧಿತ ಕುಟುಂಬಗಳಿಗೆ ಪರಿಹಾರ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಘಟಿಕೋತ್ಸವ ಉದ್ದೇಶಿಸಿ ಮಾತನಾಡಿದ ಅವರು, ನಾಡಹಬ್ಬದ ದಸರಾದ ಪ್ರಯುಕ್ತ ನಾಡಿನ ಜನರಿಗೆ ಶುಭಾಶಯ ಕೋರಿದರು. ಕೋವಿಡ್ 19 ಕಾರಣದಿಂದ ಕೆಲವು ನಿರ್ಬಂಧಗಳಿದ್ದರೂ, ಹಬ್ಬ ಆಚರಣೆಗೆ ಯಾವುದೇ ಉತ್ಸಾಹ ಕುಂದಿಲ್ಲ ಎಂದರು. ಭಾರೀ ಮಳೆ ಹಬ್ಬಗಳ ಆಚರಣೆಗೆ ಸ್ವಲ್ಪ ಮಂಕಾಗಿಸಿದೆ. ಪ್ರವಾಹ ಪೀಡಿತ ಕುಟುಂಬಗಳಿಗೆ ತೀವ್ರ ಸಹಾನೂಭೂತಿಯನ್ನು ವ್ಯಕ್ತಪಡಿಸುವುದಾಗಿ ಮೋದಿ ಹೇಳಿದರು.
ಈ ದಶಕವನ್ನು ಭಾರತದ ದಶಕವನ್ನಾಗಿ ಮಾಡಲು ಹಾಗೂ ಬೆಳವಣಿಗೆ ಖಚಿತತೆಗಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅಗತ್ಯ ಬದಲಾವಣೆ ಮಾಡಲಾಗುತ್ತಿದೆ .ಕಳೆದ ಆರೇಳು ತಿಂಗಳುಗಳಲ್ಲಿ ಕೃಷಿ, ಬಾಹ್ಯಾಕಾಶ, ರಕ್ಷಣೆ, ವಾಯುಯಾನ ಅಥವಾ ಕಾರ್ಮಿಕ ಕ್ಷೇತ್ರಗಳಲ್ಲಿ ವೇಗ ಮತ್ತು ಸುಧಾರಣೆಯ ವ್ಯಾಪ್ತಿ ಹೆಚ್ಚಾಗುತ್ತಿರುವುದನ್ನು ನೀವು ನೋಡಿರಬಹುದು ಎಂದರು.