ವಿದ್ಯಾ ಇಲಾಖಾ ನೌಕರರ ಸಹಕಾರಿ ಸಂಸ್ಥೆ ಹೆಸರು ದುರ್ಬಳಕೆ : ತನಿಖೆಗೆ ಆಗ್ರಹ

October 20, 2020

ಮಡಿಕೇರಿ ಅ.20 : ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಯ ಹೆಸರನ್ನು ಬಳಸಿಕೊಂಡು ಹೊರ ಜಿಲ್ಲೆಯಲ್ಲಿ ಬಡಾವಣೆ ನಿರ್ಮಿಸಿ ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿರುವ ಸಂಸ್ಥೆಯ ಮಾಜಿ ನಿರ್ದೇಶಕರು ಹಾಗೂ ಸದಸ್ಯರು, ಈ ಕುರಿತು ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮಾಜಿ ನಿರ್ದೇಶಕ ಹೆಚ್.ಎಸ್.ಪ್ರಕಾಶ್, ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಯ ಬೈಲಾದಲ್ಲಿ ವಸತಿ ಬಡಾವಣೆ ನಿರ್ಮಾಣ ಮಾಡಲು ಅವಕಾಶ ಇಲ್ಲದಿದ್ದರೂ ಕೆಲವರು ತಮ್ಮ ಸ್ವಂತ ಲಾಭಕ್ಕಾಗಿ ಸಂಘದ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸಂಸ್ಥೆಯ ಕಾರ್ಯವ್ಯಾಪ್ತಿಯನ್ನು ಮೀರಿ ಹೊರ ಜಿಲ್ಲೆಯಲ್ಲಿ ಬಡಾವಣೆ ನಿರ್ಮಾಣಕ್ಕೆ ಸಂಸ್ಥೆಯ ಹೆಸರನ್ನು ಬಳಸಲು ಅವಕಾಶ ನೀಡಲಾಗಿದೆ. ಇದರಿಂದ ಸಂಸ್ಥೆಗೆ ಯಾವ ಲಾಭವೂ ಇಲ್ಲವೆಂದು ತಿಳಿಸಿದರು.
ಸಹಕಾರಿ ಸಂಸ್ಥೆಯ ವ್ಯಾಪ್ತಿ ಕೊಡಗು ಜಿಲ್ಲೆಯನ್ನು ಮಾತ್ರ ಒಳಗೊಂಡಿದ್ದು, ಹೊರ ಜಿಲ್ಲೆಯಲ್ಲಿ ಯಾವುದೇ ವ್ಯವಹಾರವನ್ನು ನಡೆಸುವಂತಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಬಡಾವಣೆಯ ಮಾಲೀಕರುಗಳ ವಿರುದ್ಧ ದೂರು ನೀಡಲಾಗಿದೆ. ಕೆಲವು ನಿರ್ದೇಶಕರು ಬಡಾವಣೆಯ ಮಾಲೀಕರ ರಕ್ಷಣೆಗೆ ನಿಂತಿದ್ದು, ಇವರು ವಂಚನೆಯಲ್ಲಿ ಭಾಗಿಯಾಗಿರಬಹುದೆಂದು ಪ್ರಕಾಶ್ ಸಂಶಯ ವ್ಯಕ್ತಪಡಿಸಿದರು.
ವರ್ಷದ ಹಿಂದೆ 7 ನಿರ್ದೇಶಕ ಸ್ಥಾನ ಖಾಲಿಯಾದಾಗ ಆ ಹುದ್ದೆಗಳಿಗೆ ಸಹಕಾರಿಯ 2,500 ಸದಸ್ಯರ ಗಮನಕ್ಕೆ ತಾರದೇ ತಮಗೆ ಅನುಕೂಲವಾಗುವಂತೆ ಕೆಲವರನ್ನು ನೇಮಕ ಮಾಡಿಕೊಳ್ಳಲಾಗಿದೆ. ಕೆಲವು ದಿನಗಳ ಹಿಂದೆ ಸಂಸ್ಥೆಯ ಪರವಾಗಿ ಎಂದು ಹೇಳಿಕೆ ನೀಡಿರುವ ಸಂಸ್ಥೆಯ ಪ್ರಮುಖರು, ತಮಗೆ ಇಷ್ಟ ಬಂದ ರೀತಿಯಲ್ಲಿ ಪತ್ರವನ್ನು ಸಿದ್ಧಪಡಿಸಿ ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ. ಇವರ ವರ್ತನೆ ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ ಎಂದು ಹೇಳಿದರು.
ಒಟ್ಟು ಪ್ರಕರಣದ ಬಗ್ಗೆ ಸಂಘದ ಮುಖ್ಯ ಕಾರ್ಯನಿರ್ವಣಾಧಿಕಾರಿಗಳಿಗೆ ಲಿಖಿತ ರೂಪದಲ್ಲಿ ದೂರು ನೀಡಿದ್ದು, ಶೀಘ್ರ ತನಿಖೆ ಕೈಗೊಳ್ಳಬೇಕೆಂದು ಪ್ರಕಾಶ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ನಿರ್ದೇಶಕ ಪಿ.ಎಸ್.ಜನಾರ್ಧನ್, ಸದಸ್ಯರುಗಳಾದ ಡಿ.ಎ.ಮೋಹನ್, ಹೆಚ್.ಜಿ.ಕುಮಾರ್ ಹಾಗೂ ಹೆಚ್.ಎನ್.ಶಶಿಧರ್ ಉಪಸ್ಥಿತರಿದ್ದರು.

error: Content is protected !!