ಕಾವೇರಿ ತೀರ್ಥೋದ್ಭವ : ನೈಜ ಭಕ್ತರಿಗೆ ಅನ್ಯಾಯ : ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಾವೇರಿ ಭಕ್ತ ಜನಸಂಘ ಅಸಮಾಧಾನ

20/10/2020

ಮಡಿಕೇರಿ ಅ. 20 : ಜಿಲ್ಲಾಡಳಿತ, ಜನಪ್ರತಿನಿಧಿಗಳು ಮತ್ತು ವ್ಯವಸ್ಥಾಪನಾ ಸಮಿತಿಯ ಗೊಂದಲಕಾರಿ ನಿರ್ಧಾರದಿಂದ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ನೈಜ ಭಕ್ತರು ಆಗಮಿಸಲು ತೀವ್ರ ತೊಂದರೆಯನ್ನು ನೀಡಿದ್ದು, ಇದರಿಂದ ತೀರ್ಥೋದ್ಭವಕ್ಕೆ ಆಗಮಿಸಲು ಬಯಸಿದ್ದ ಸಾವಿರಾರು ಭಕ್ತರು ವಂಚಿತರಾಗುವಂತೆ ಆಗಿದೆ ಎಂದು ಕಾವೇರಿ ಭಕ್ತ ಜನ ಸಂಘ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ಸಂಘದ ಅಧ್ಯಕ್ಷ ಕಳ್ಳಿಚಂಡ ರಾಬಿನ್‍ಸುಬ್ಬಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಭಕ್ತರನ್ನು ತಡೆಹಿಡಿಯುವ ಪೂರ್ವಗ್ರಹ ಪೀಡಿತ ನಿರ್ಧಾರ ಎಂದು ಖಂಡನೆ ವ್ಯಕ್ತಪಡಿಸಿದರು.
ಅ.17ರ ಮುಂಜಾನೆ ನಡೆದ ತೀರ್ಥೋದ್ಭವಕ್ಕೆ ಜಿಲ್ಲೆಯ ವಿವಿಧೆಡೆಯಿಂದ ತಾ.16ರ ಮಧ್ಯರಾತ್ರಿಯಿಂದಲೇ ಆಗಮಿಸಿದ ಭಕ್ತರನ್ನು ತಡೆದು ಕಿರುಕುಳ ನೀಡುವ ಮೂಲಕ ತೊಂದರೆ ನೀಡಿರುವುದು ಭಕ್ತರ ಭಾವನೆಗೆ ಧಕ್ಕೆಯಾಗಿದ್ದು, ಇದಕ್ಕೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮತ್ತು ವ್ಯವಸ್ಥಾಪನಾ ಸಮಿತಿ ನೇರ ಹೊಣೆ ಎಂದು ಆರೋಪಿಸಿದರು.
ತೀರ್ಥೋದ್ಭವಕ್ಕೆ ಆಗಮಿಸಿದ ಭಕ್ತಾಧಿಗಳನ್ನು ಭಾಗಮಂಡಲಕ್ಕೆ 5 ಕಿ.ಮೀ ಹಿಂದೆ ಕೋರಂಗಾಲದಲ್ಲಿ ಮೀಸಲು ಪೊಲೀಸ್ ಪಡೆ ಮತ್ತು ಭಾಗಮಂಡಲದ ಪೊಲೀಸರು ತಡೆದರು. ಈ ಸಂದರ್ಭ ಮುಂಜಾನೆ 2.30 ಗಂಟೆ ಸಮಯಕ್ಕೆ ಭಾಗಮಂಡಲದ ಪೊಲೀಸ್ ಸಿಬ್ಬಂದಿಗಳು ಭಕ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೆಣಕಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಯಾವುದೇ ಘರ್ಷಣೆಗೆ ಅವಕಾಶ ಮಾಡಿಕೊಡದೇ ತೀರ್ಥೋದ್ಭವಕ್ಕೆ ತಲುಪುವ ಏಕೈಕ ಗುರಿಯಿಂದ ಭಕ್ತಾಧಿಗಳು ತಾಳ್ಮೆ ಕಳೆದು ಕೊಳ್ಳದೇ ಶಾಂತಿಯುತವಾಗಿ ವರ್ತಿಸಿದರು ಎಂದು ರಾಬಿನ್ ಸುಬ್ಬಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಮುಂಜಾನೆ 3.30 ಗಂಟೆಗೆ ಭಾಗಮಂಡಲದಿಂದ ತಲಕಾವೇರಿಗೆ 8 ಕಿ.ಮೀ. ಪಾದಯಾತ್ರೆಯ ಮೂಲಕ ತಳಿಯತಕ್ಕಿ ಬೊಳಕ್ ಹಿಡಿದ ಯುವತಿಯರು ಮತ್ತು ದುಡಿಕೊಟ್ಟ್ ಪಾಟ್ ನೊಂದಿಗೆ ಯುವಕ ಭಕ್ತಾಧಿಗಳು ತೆರಳುವ ಸಂದರ್ಭ ಭಕ್ತಾಧಿಗಳಿಗೆ ಬೆಳಕಿನ ವ್ಯವಸ್ಥೆ ಕಲ್ಪಿಸಲು ತಾವೇ ಮಾಡಿಕೊಂಡಿದ್ದ ವಾಹನ ಮತ್ತು ನೀರು, ಕಾಫಿ ಪಾನೀಯ, ಲಘು ಉಪಾಹಾರವಿದ್ದ 2 ಪಾಸ್ ಹೊಂದಿದ್ದ ವಾಹನವನ್ನು ತೆರಳಲು ಅವಕಾಶ ನೀಡಲಿಲ್ಲ. ಎಷ್ಟೇ ಮನವಿ ಮಾಡಿಕೊಂಡರೂ ಇವೆರಡು ವಾಹನಗಳನ್ನು ಪೊಲೀಸ್ ಅಧಿಕಾರಿಗಳು ಬಿಡದೇ ಇದ್ದ ಕಾರಣ ಬೀದಿ ದೀಪವಿಲ್ಲದೇ ಕಗ್ಗತ್ತಲ ರಸ್ತೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ನಡೆಸಿದ್ದು, ಇದು ಕ್ಷೇತ್ರಕ್ಕೆ ತೆರಳುವುದನ್ನು ಉದ್ದೇಶಪೂರ್ವಕವಾಗಿಯೇ ತಡೆಹಿಡಿಯಲು ಹಾಗೂ ತೀರ್ಥೊದ್ಬವಕ್ಕೆ ಸಕಾಲದಲ್ಲಿ ತೆರಳಲು ಅಡೆತಡೆ ಮಾಡುವ ಹುನ್ನಾರವಾಗಿದೆ ಎಂದು ಅವರು ಕಿಡಿಕಾರಿದರು.

ಇದಕ್ಕೂ ಮೊದಲು ಕೋರಂಗಾಲ ಜಂಕ್ಷನ್‍ನಲ್ಲಿ ಭಕ್ತಾಧಿಗಳನ್ನು ತಡೆದು ನಿಲ್ಲಿಸಿದ ಪೊಲೀಸರು ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿಯ ಪತ್ರ ಇಲ್ಲದಿದ್ದರೆ ಬಿಡುವುದಿಲ್ಲ ಎಂದು ತಡೆಯೊಡ್ಡಿದರು. ಆದರೆ ತೀರ್ಥೊದ್ಬವಕ್ಕೆ ಸರಕಾರ ರೂಪಿಸಿದ ಕೋವಿಡ್ ಪರೀಕ್ಷೆ ಎಂಬ ನಿಯಮ ಗೊಂದಲಕಾರಿಯಾಗಿದೆ. ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಥೊದ್ಬವಕ್ಕೆ ಆಗಮಿಸುವ ಎಲ್ಲಾ ಭಕ್ತಾದಿಗಳಿಗೂ ಕೋವಿಡ್ ಪರೀಕ್ಷೆ ಖಡ್ಡಾಯಗೊಳಿಸಿ ಆದೇಶ ಮಾಡಲಾಯಿತು. ಇದಕ್ಕೆ ತೀವ್ರ ವಿರೋಧ ಬಂದ ಹಿನ್ನೆಲೆ ಹೊರರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವ ಭಕ್ತಾಧಿಗಳಿಗೆ ಮಾತ್ರ ಪರೀಕ್ಷೆ ಖಡ್ಡಾಯ ಎಂದು ಬದಲಾಯಿಸಲಾಗಿದೆ ಎಂದರು.
ತೀರ್ಥೋದ್ಭವಕ್ಕೆ ಎರಡು ದಿನದ ಹಿಂದೆ ಕೊನೆ ಗಳಿಗೆಯಲ್ಲಿ ಮತ್ತೆ ತೀರ್ಥೋದ್ಭವಕ್ಕೆ ಆಗಮಿಸುವ ಎಲ್ಲಾ ಭಕ್ತಾಧಿಗಳಿಗೂ ಕೋವಿಡ್ ನೆಗೆಟಿವ್ ವರದಿ ಪತ್ರ ಖಡ್ಡಾಯಗೊಳಿಸಲಾಯಿತು. ಇದೊಂದು ಭಕ್ತಾಧಿಗಳನ್ನು ಕ್ಷೇತ್ರಕ್ಕೆ ಬರದಂತೆ ತಡೆಯುವ ಪೂರ್ವಯೋಜಿತ ಯೋಜನೆಯಾಗಿರುವುದು ಸ್ಪಷ್ಟವಾಯಿತು. ಏಕೆಂದರೆ ಒಂದು ವೇಳೆ ಕೋವಿಡ್ ನಿಯಮವನ್ನು ಪ್ರಾಮಾಣಿಕವಾಗಿ ಪಾಲಿಸುವುದು, ಸೋಂಕು ತಡೆಗಟ್ಟಲು ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ಮೊದಲ ಪೂರ್ವಭಾವಿ ಸಭೆಯಲ್ಲಿ ಇದನ್ನು ಖಡ್ಡಾಯಗೊಳಿಸಿ ಕೊವೀಡ್ ಪರೀಕ್ಷೆ ಮಾಡಲು ಸರಕಾರ ಸೂಕ್ತ ವ್ಯವಸ್ಥೆಯನ್ನು ಜಿಲ್ಲೆಯ ವಿವಿಧೆಡೆ ಭಕ್ತಾಧಿಗಳಿಗೆ ಕಲ್ಪಿಸಬೇಕಿತ್ತು.
ನಮಗೆ ತಿಳಿದಿರುವ ಹಾಗೆ ಮಡಿಕೇರಿ ಕೊವೀಡ್ ಪರೀಕ್ಷಾ ಲ್ಯಾಬ್‍ನಲ್ಲಿ ಪ್ರತಿನಿತ್ಯ 200 ಸಂಖ್ಯೆಯಷ್ಟು ಕೋವಿಡ್ ಪರೀಕ್ಷೆ ಮಾದರಿಯ ಫಲಿತಾಂಶ ನೀಡಬಹುದು. ಸಾಮಾನ್ಯ ಪರೀಕ್ಷೆಯ ಫಲಿತಾಂಶಕ್ಕೆ ಹಲವು ದಿನಗಳು ಕಾಯಬೇಕಾಗುತ್ತದೆ. ರ್ಯಾಪಿಡ್ ಪರೀಕ್ಷೆ ಮಾಡುವ ಸೌಲಭ್ಯ ಹೆಚ್ಚು ಜನರಿಗೆ ಮಾಡಲು ವ್ಯವಸ್ಥೆ ಸಾಧ್ಯವಿಲ್ಲ ಎಂಬುವುದು ಗೊತ್ತಿರುವ ಸತ್ಯವಾಗಿದೆ.
ಹೀಗಿರುವಾಗ ಕ್ಷೇತ್ರಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಖಡ್ಡಾಯ ಪರೀಕ್ಷೆ ಮಾಡಲು ಮೈಸೂರು, ಬೆಂಗಳೂರಿನ ಖಾಸಗಿ ಆಸ್ಪತೆಯಲ್ಲಿ ಪರೀಕ್ಷೆ ಮಾಡಿ 48ಗಂಟೆಗಳೊಳಗಿನ ಫಲಿತಾಂಶ ಪತ್ರ ತರಲು ರೂ. 5 ರಿಂದ 7 ಸಾವಿರ ವೆಚ್ಚವಾಗಲಿದೆ. ಒಬ್ಬ ಸಾಮಾನ್ಯ ಭಕ್ತ ಇಷ್ಟು ಹಣ ಖರ್ಚು ಮಾಡಿ ಕ್ಷೇತ್ರಕ್ಕೆ ಆಗಮಿಸಲು ಸಾಧ್ಯವಾಗಲಿದೆಯೇ ಎಂದು ಪ್ರಶ್ನಿಸಿದರು.
ಹಲವು ದಶಕಗಳಿಂದ ಕ್ಷೇತ್ರದಲ್ಲಿ ಕಾವೇರಿ ಮಾತೆ ಭಕ್ತರಾಗಿ ಹಿರಿಯರಾದ ಮುದ್ದಂಡ ದೇವಯ್ಯ ಅವರ ತಂಡ ದುಡಿಕೊಟ್ಟ್ ಪಾಟ್ ನೊಂದಿಗೆ ಶ್ರದ್ಧಾಭಕ್ತಿಯಿಂದ ಪಾಲ್ಗೊಳ್ಳುತ್ತಿರುವುದು ಎಲ್ಲಾರಿಗೂ ಗೊತ್ತಿದೆ. ಆದರೆ ಇವರ ತಂಡವನ್ನು ಸಾಂಪ್ರಾದಾಯಿಕ ಉಡುಪಿನೊಂದಿಗೆ ಆಗಮಿಸಿ ದುಡಿಕೊಟ್ಟ್ ಪಾಟ್ ನಡೆಸದಂತೆ ಜನಪ್ರತಿನಿಧಿಯೊಬ್ಬರು ಎಚ್ಚರಿಸಿದ್ದರು. ಆದರೂ ಇದನ್ನು ವಿರೋಧಿಸಿ ದೇವಯ್ಯ ಅವರ ತಂಡ ಕ್ಷೇತ್ರಕ್ಕೆ ಆಗಮಿಸಿದಾಗ ದುಡಿಕೊಟ್ಟ್ ಪಾಟ್ ನಡೆಸದಂತೆ ಪೊಲೀಸ್ ಅಧಿಕಾರಿಗಳು ಸೂಚಿಸಿರುವುದು ಸಹ ಖಂಡನೀಯ ಎಂದರು.
ಕೊವೀಡ್ ಪರೀಕ್ಷೆ ಖಡ್ಡಾಯಗೊಳಿಸಿದ ನಂತರ ತಾ. 16ರ ಸಂಜೆ ಉಸ್ತುವಾರಿ ಸಚಿವರು, ಜಿಲ್ಲಾಡಳಿತದ ಪ್ರಮುಖರು, ವ್ಯವಸ್ಥಾಪನಾ ಸಮಿತಿಯವರು, ಮಾಧ್ಯಮದವರು ತಲಕಾವೇರಿಗೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದರು. ಆ ಸಂದರ್ಭ ಕೊವೀಡ್ ನಿಯಮವನ್ನು ಯಾಕೆ ಪಾಲಿಸಲಿಲ್ಲ. ಇಲ್ಲಿ ಪಾಲ್ಗೊಂಡಿದ್ದ ಎಲ್ಲಾರ ಬಳಿಯೂ ಕೊವೀಡ್ ನೆಗೆಟಿವ್ ಪತ್ರ ಇತ್ತೆ ಎಂದು ಪ್ರಶ್ನಿಸಿದ ಅವರು ತಾ. 17ರ ಮುಂಜಾನೆ ತೀರ್ಥೋದ್ಭವಕ್ಕೆ ಬಂದೋಬಸ್ತ್ ಕಲ್ಪಿಸಿದ್ದ ಸುಮಾರು 500 ಪೆÇಲೀಸರು, ಸುಮಾರು 100 ಮಾಧ್ಯಮದವರು, ಸಚಿವರು, ಶಾಸಕರು, ವಿ.ಐ.ಪಿಗಳು ಮತ್ತು ಅವರ ಕುಟುಂಬಕ್ಕೆ ಕೊವೀಡ್ ಪರೀಕ್ಷೆ ಮಾಡಿ ನೆಗೆಟಿವ್ ವರದಿಯ ಪತ್ರ ಇರಿಸಿಕೊಂಡು ಬಂದಿದ್ದರೆ ಎಂಬುದನ್ನು ಸಂಬಂಧ ಪಟ್ಟವರು ಸ್ಪಷ್ಟಪಡಿಸಲಿ ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಸರಕಾರದ ಭಕ್ತ ವಿರೋಧಿ ನೀತಿಯನ್ನು ಖಂಡಿಸಿ ಕಾವೇರಿ ಮಾತೆಯನ್ನು ಕುಲದೇವರು ಎಂದು ಪೂಜಿಸುವ ಸಮುದಾಯ ಪಾದಯಾತ್ರೆಯ ಮೂಲಕ ಕ್ಷೇತ್ರಕ್ಕೆ ತೆರಳಿದ್ದರು. ಆದರೆ ಕಾವೇರಿಯನ್ನು ಆರಾಧಿಸುವ ಜಿಲ್ಲೆಯ ಎಲ್ಲಾ ಸಾವಿರಾರು ಭಕ್ತರಿಗೆ ತೀರ್ಥೋದ್ಭವ ದರ್ಶನಕ್ಕೆ ಆಗಮಿಸುವ ಆಸಕ್ತಿ ಇದ್ದರೂ ಸರಕಾರದ ಗೊಂದಲದ ನೀತಿಯಿಂದ ಅವಕಾಶ ವಂಚಿತರಾದರು. ಇದಕ್ಕೆ ಯಾರು ಹೊಣೆ ಎಂದು ಸಭೆಯಲ್ಲಿ ಅಸಮಾಧಾನ ವ್ಯಕ್ತಗೊಂಡಿತು.
ತೀರ್ಥೊದ್ಬವ ಸಂದರ್ಭ ಅರ್ಚಕರೊಬ್ಬರು ಪ್ರಾರಂಭದಲ್ಲಿ ತೀರ್ಥವನ್ನು ಪಾತ್ರೆಯಿಂದ ಪೆÇ್ರೀಕ್ಷಣೆ ಮಾಡುವಾಗ ತಮ್ಮ ತಲೆಗೆ ಮೊದಲು ಹಾಕಿಕೊಂಡರು. ತಮ್ಮ ತಲೆಯಿಂದ ಹರಿದ ತೀರ್ಥ ಕುಂಡಿಕೆಗೆ ಬಿದ್ದಿರುವುದು ಕ್ಷೇತ್ರದ ಪಾವಿತ್ರ್ಯತೆ ಹಾಗೂ ಆಚಾರಕ್ಕೆ ಧಕ್ಕೆ ತಂದಿದೆ ಎಂದು ಸಭೆಯಲ್ಲಿ ಅಸಮಾದಾನ ವ್ಯಕ್ತಗೊಂಡವು.

ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಮತ್ತು ವ್ಯವಸ್ಥಾಪನಾ ಸಮಿತಿ ಭಕ್ತರ ಭಾವನೆಗೆ ಸೂಕ್ತವಾಗಿ ಸ್ಪಂದಿಸಲಿಲ್ಲ. ಕೆಲವು ಜನಪ್ರತಿನಿಧಿಗಳು ಸಕಾಲಕ್ಕೆ ಸ್ಪಂದಿಸಿದೇ ಹೊಣೆಗಾರಿಕೆ ಮರೆತು ಮೌನವಹಿಸಿದ ಪರಿಣಾಮ ಭಕ್ತಾಧಿಗಳಿಗೆ ಅನ್ಯಾಯವಾಯಿತು ಎಂದು ಆಕ್ರೋಶ ವ್ಯಕ್ತವಾಯಿತು.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಎಸ್. ತಮ್ಮಯ್ಯ ಅವರು ಭಕ್ತರ ಭಾವನೆಗೆ ಸ್ಪಂದಿಸಿ ಪೂರ್ವಭಾವಿ ಸಭೆಯಲ್ಲಿಯೇ ಸೂಕ್ತ ನಿರ್ಧಾರ ಕೈಗೊಂಡು ಕ್ಷೇತ್ರಕ್ಕೆ ಆಗಮಿಸಲು ಅವಕಾಶ ಕಲ್ಪಿಸಿ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸದೇ ತೀರ್ಥೊದ್ಬವ ಸಂದರ್ಭ ಕ್ಷೇತ್ರದಿಂದ ಅಸಮಾಧಾನಗೊಂಡು ಹೊರತೆರಳಿರುವುದು ಸರಿಯಲ್ಲ.

ಜಿಲ್ಲೆಯ ವಿವಿಧೆಡೆಯಿಂದ ರಾತ್ರಿ ಪ್ರಯಾಣ ಮಾಡಿ 8 ಕಿ.ಮೀ ಬರಿಗಾಲಿನ ಪಾದಯಾತ್ರೆಯ ಮೂಲಕ ಕ್ಷೇತ್ರಕ್ಕೆ ಆಗಮಿಸಿದ ಭಕ್ತಾಧಿಗಳು ಕಾವೇರಿಯ ಮೇಲೆ ಶ್ರದ್ಧಾಭಕ್ತಿಯಿಂದ ದರ್ಶನಕ್ಕೆ ಬರುತ್ತಾರೆ. ಅದನ್ನು ತಡೆಯುವುದು ಭಕ್ತರ ಭಾವನೆಗೆ ನೋವುಂಟು ಮಾಡಿದೆ ಎಂದರು.
ವಿ.ಐ.ಪಿ ಹಾಗೂ ವಿ.ವಿ.ಐ.ಪಿಗಳು ಕಾರಿನಲ್ಲಿ ಕ್ಷೇತ್ರದ ಮೆಟ್ಟಿಲವರೆಗೆ ನಿರಾಯಾಸವಾಗಿ ಆಗಮಿಸಿ ದರ್ಶನ ಪಡೆಯುತ್ತಾರೆ. ನೈಜ ಭಕ್ತಾಧಿಗಳನ್ನು ಕ್ಷೇತ್ರಕ್ಕೆ ಪ್ರವೇಶಿಸುವ ತಡೆಯುವ ಪಾಪದ ಕೆಲಸವನ್ನು ಮಾಡುವವರಿಗೆ ಭಕ್ತರ ಭಾವನೆ ಅರ್ಥವಾಗದೇ ಅಧಿಕಾರ ಮದದಲ್ಲಿ ತೇಲಾಡುವುದನ್ನು ಮಾಡದಿರಲಿ ಎಂದು ಸಭೆಯಲ್ಲಿ ಎಚ್ಚರಿಸಿಸಲಾಯಿತು.

ಪಾದಯಾತ್ರೆಯ ಮೂಲಕ ಕ್ಷೇತ್ರಕ್ಕೆ ಪ್ರವೇಶಿಸಲು ಭಕ್ತಾಧಿಗಳನ್ನು ಪೆÇಲೀಸರು ತಡೆದಾಗ ಕೊನೆಗಳಿಗೆಯಲ್ಲಿ ಶಾಸಕ ಅಪ್ಪಚ್ಚುರಂಜನ್, ಶಾಸಕಿ ವೀಣಾ ಅಚ್ಚಯ್ಯ ಹಾಗೂ ಕೆ.ಪಿ. ಚಂದ್ರಕಲಾ ಅವರು ಭಕ್ತಾಧಿಗಳ ಭಾವನೆಗೆ ಸ್ಪಂದಿಸಿ ಪ್ರವೇಶಿಸಲು ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಇಂತಹ ಸಂಘರ್ಷದ ಸ್ಥಿತಿಯಲ್ಲಿ ಕ್ಷೇತ್ರದಲ್ಲಿದ್ದು, ಭಕ್ತರಿಗೆ ಬೆಂಬಲವಾಗಿ ನಿಲ್ಲದೇ ಜಾರಿಕೊಳ್ಳುವ ಉದ್ದೇಶದಿಂದ ಗೈರು ಹಾಜರಾಗಿದ್ದದ್ದು, ತಮ್ಮ ಹೊಣೆಗಾರಿಕೆ ಮರೆತಂತಿದೆ.ಇವರಿಗೆ ಕಾವೇರಿ ಮಾತೆ ಬಗ್ಗೆ ಭಕ್ತಿ ಇಲ್ಲವೇ ಎಂದು ಕಿಡಿಕಾರಿದರು.

ತಮ್ಮ ಕ್ಷೇತ್ರದ ತಲಕಾವೇರಿ ಕಾರ್ಯಕ್ರಮ ಬಿಟ್ಟು ಪೂರ್ವಯೋಜಿತ ಗೋಣಿಕೊಪ್ಪ ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಬೋಪಯ್ಯ ಅವರು ತೀರ್ಥೊದ್ಬವ ಸಮಯದಲ್ಲಿಯೇ ಪಾಲ್ಗೊಳ್ಳುವ ಅಗತ್ಯ ಏನಿತ್ತು. ತಲಕಾವೇರಿ ಉತ್ಸವದ ಸಿದ್ಧತೆಯ ಹಲವು ಪೂರ್ವಭಾವಿ ಸಭೆಯಲ್ಲಿ ಶಿಷ್ಟಚಾರದಂತೆ ಭಾಗವಹಿಸಿ ನಿಯಮ ರೂಪಿಸುವ ಅಗತ್ಯತೆ ಇವರಿಗೆ ಎನಿತ್ತು, ಶಿಷ್ಟಾಚಾರದಂತೆ ತಲಕಾವೇರಿ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವರು ಅಗಮಿಸುವಾಗ ಇತರ ಜವಾಬ್ದಾರಿಯುತ ಜನಪ್ರತಿನಿಧಿಗಳಂತೆ ಶಾಸಕ ಬೋಪಯ್ಯ ಪಾಲ್ಗೊಳ್ಳದಿರುವುದಕ್ಕೆ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು.

ಸಭೆಯಲ್ಲಿ ಕಾವೇರಿ ಭಕ್ತ ಸಂಘದ ಅಚ್ಚಂಡೀರ ಪವನ್ ಪೆಮ್ಮಯ್ಯ, ನಿವೃತ್ತ ಸೇನಾಧಿಕಾರಿ ಚೆಪ್ಪುಡೀರ ಕರ್ನಲ್ ಮುತ್ತಣ್ಣ, ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ, ಕೊಕ್ಕಲೆಮಾಡ ಮಂಜುಚಿಣ್ಣಪ್ಪ, ಚೆಪ್ಪುಡೀರ ಶೆರಿಸುಬ್ಬಯ್ಯ, ಮಲ್ಚೀರ ಶಾನ್ ಬೋಪಯ್ಯ ಪಾಲ್ಗೊಂಡಿದ್ದರು.