ಸೋಮವಾರಪೇಟೆಯಲ್ಲಿ ನಬಾರ್ಡ್‍ನಿಂದ ನೈರ್ಮಲ್ಯ ಸಾಕ್ಷರತಾ ಅಭಿಯಾನ

20/10/2020

ಮಡಿಕೇರಿ ಅ. 20 : ಮೈಸೂರಿನ ಓಡಿಪಿ ಸಂಸ್ಥೆ ಹಾಗೂ ಬೆಂಗಳೂರಿನ ನಬಾರ್ಡ್ ಸಂಸ್ಥೆಯ ಸಹಯೋಗದಲ್ಲಿ ಸೋಮವಾರಪೇಟೆಯಲ್ಲಿ ನೈರ್ಮಲ್ಯ ಸಾಕ್ಷರತಾ ಅಭಿಯಾನ ನಡೆಯಿತು.
ಸೋಮವಾರಪೇಟೆಯ ಹಾನಗಲ್ಲು ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ನಬಾರ್ಡಿನ ಕೊಡಗು ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ಶ್ರೀವಾಸ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ದೇಶದ ಪ್ರಮುಖ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನದ ವಾಶ್ (ವಾಟರ್ ಎಂಡ್ ನಾನುಬೇಷನ್) ಸಾಕ್ಷರತಾ ಅಭಿಯಾನವನ್ನು ಕರ್ನಾಟಕ ರಾಜ್ಯದ 100 ಹಳ್ಳಿಗಳಲ್ಲಿ ಹಮ್ಮಿಕೊಂಡಿದೆ ಎಂದು ಮಾಹಿತಿ ನೀಡಿದರು.
ಇದರಿಂದ ಸಮುದಾಯ ಮತ್ತು ವೈಯಕ್ತಿಕ ನೈರ್ಮಲ್ಯತೆಯನ್ನು ಕಾಪಡುವುದರ ಮೂಲಕ ದೇಶವನ್ನು ಆರೋಗ್ಯಕರ ಸಮಾಜವನ್ನಾಗಿ ಪರಿವರ್ತಿಸಲು ಸಾಧ್ಯ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಗುರುಶಾಂತಮ್ಮ ಮಾತನಾಡಿ, ಎಲ್ಲರೂ ತಮ್ಮ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಎಲ್ಲರೂ ಶೌಚಲಾಯವನ್ನು ಬಳಸುವ ಮೂಲಕ ರೋಗಗಳು ಹರಡದಂತೆ ತಡೆಗಟ್ಟಬೇಕು ಎಂದರು.
ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೋನಾ ಮುಕ್ತ ಸಮಾಜಕ್ಕೆ ಮುಂದಾಗಬೇಕು ಎಂದರು.
ಓಡಿಪಿ ಸಂಸ್ಥೆಯ ಗ್ರಾಮ ವಿಕಾಸ ಪುರುಷ ಒಕ್ಕೂಟದ ಸಂಯೋಜಕ ಜಾನ್ ಬಿ. ರಾಡ್ರಿಗಸ್ ಮಾತನಾಡಿ, ದೇಶವು ಅಭಿವೃದ್ಧಿಪಥದಲ್ಲಿ ಸಾಗಬೇಕಾದರೆ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ಉತ್ತಮ ಆರೋಗ್ಯ, ಉತ್ತಮ ಸಮಾಜ ಎಂಬ ಘೋಷಣೆ ನಮ್ಮದಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಎಲ್ಲರೂ ಸಹಕಾರಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಎ.ಎನ್.ಎಮ್ ಗೀತಾ, ಹಾನಗಲ್ಲು ಪ್ರಕೃತಿ ಜಲಾನಯನ ಸಮಿತಿ ಅಧ್ಯಕ್ಷ ರಾಜು ಪೊನ್ನಪ್ಪ, ಪ್ರಮುಖರಾದ ಜೋಯಪ್ಪ, ಓಡಿಪಿ ಸಂಸ್ಥೆಯ ಕಾರ್ಯಕರ್ತ ದೀಕ್ಷಿತ್ ಸಮಿತಿಯ ಸದಸ್ಯರುಗಳು, ಹಾಗೂ ಗ್ರಾಮಸ್ಥರು ಹಾಜರಿದ್ದರು.