ಕರಗಗಳ ನಗರ ಸಂಚಾರಕ್ಕೆ ಅವಕಾಶ ನೀಡಿ : ನೆರವಂಡ ಉಮೇಶ್ ಒತ್ತಾಯ

20/10/2020

ಮಡಿಕೇರಿ ಅ.20 : ಮಡಿಕೇರಿ ನಗರದ ಐತಿಹಾಸಿಕ ನಾಲ್ಕು ಶಕ್ತಿ ದೇವತೆಗಳ ದಸರಾ ಕರಗಗಳ ನಗರ ಸಂಚಾರಕ್ಕೆ ನಿರ್ಬಂಧ ಹೇರಿರುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್, ನವರಾತ್ರಿಯ ಕೊನೆಯ ಮೂರು ದಿನಗಳಾದರು ಕರಗ ಸಂಚಾರಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೋವಿಡ್ ಮಾರ್ಗಸೂಚಿಯ ನೆಪವೊಡ್ಡಿ ಕೊಡಗು ಜಿಲ್ಲೆಗೆ ಮಾತ್ರ ಸೀಮಿತವಾಗಿ ಎಲ್ಲಾ ನಿಯಮಗಳನ್ನು ಹೇರಿಕೆ ಮಾಡುತ್ತಿರುವುದು ಖಂಡನೀಯ. ತಲಕಾವೇರಿಯಲ್ಲಿ ತೀರ್ಥೋದ್ಭವದ ಸಂದರ್ಭದಲ್ಲೂ ಭಕ್ತರ ಭಾವನೆಗೆ ವಿರುದ್ಧವಾಗಿ ಜಿಲ್ಲಾಡಳಿತ ನಡೆದುಕೊಂಡಿದೆ. ಇದೀಗ ಮಡಿಕೇರಿ ನಗರ ದಸರಾ ದಿನಗಳ ಧಾರ್ಮಿಕ ವಿಧಿ, ವಿಧಾನಗಳಿಗೂ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಬಹಳ ವರ್ಷಗಳ ಹಿಂದೆ ಮಡಿಕೇರಿಯನ್ನು ಸಾಂಕ್ರಾಮಿಕ ರೋಗ ಕಾಡಿದಾಗ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವವನ್ನು ಆರಂಭಿಸಲಾಯಿತು. ಊರಿನ ಹಿತಕ್ಕಾಗಿ ಕರಗಗಳು ನಗರ ಸಂಚಾರ ಕೈಗೊಂಡು ಮನೆ ಮನೆಗಳಿಂದ ಪೂಜೆ ಪಡೆಯುವ ಪದ್ಧತಿ ನಿರಂತರವಾಗಿ ನಡೆದುಕೊಂಡು ಬಂದಿದೆ. ಆದರೆ ಪ್ರಸ್ತುತ ವರ್ಷ ಕರಗಗಳು ನಗರ ಸಂಚಾರವನ್ನೇ ಮಾಡಬಾರದೆಂದು ಜಿಲ್ಲಾಡಳಿತ ಅರ್ಥಹೀನ ಆದೇಶ ನೀಡಿರುವುದು ಹಾಸ್ಯಾಸ್ಪದವಾಗಿದೆ. ರಾಜ್ಯದ ಯಾವ ಭಾಗದಲ್ಲೂ ಅನ್ವಯವಾಗದ ನಿಯಮಾವಳಿಗಳು ಕೊಡಗಿನಲ್ಲಿ ಮಾತ್ರ ಜಾರಿಯಾಗುತ್ತಿದೆ.
ಮೈಸೂರು ದಸರಾ ಹೆಚ್ಚು ನಿರ್ಬಂಧಗಳಿಲ್ಲದೆ ಸಾಂಗವಾಗಿ ನಡೆಯುತ್ತಿದೆ. ಉಪಚುನಾವಣೆಗಳ ಪ್ರಚಾರ ಕಾರ್ಯ ಕೂಡ ಭರ್ಜರಿಯಾಗಿ ಆಗುತ್ತಿದೆ. ಸಚಿವರುಗಳು ಜನ ಜಂಗುಳಿಯ ನಡುವೆಯೇ ಸಂಚರಿಸುತ್ತಾರೆ. ಜಿಲ್ಲಾಡಳಿತದ ಭವನ ಪ್ರತಿದಿನ ಮಿತಿ ಮೀರಿದ ಜನಸಂಖ್ಯೆಯಿಂದ ಕೂಡಿರುತ್ತದೆ. ಪರಿಸ್ಥಿತಿ ಹೀಗಿರುವಾಗ ವರ್ಷಕ್ಕೊಮ್ಮೆ ಬರುವ ದಸರಾ ಆಚರಣೆಗೆ ಮಾತ್ರ ಕೊಡಗು ಜಿಲ್ಲಾಡಳಿತ ನಿರ್ಬಂಧ ಹೇರುತ್ತಿರುವುದು ಯಾಕೆ ಮತ್ತು ಆಡಳಿತ ಪಕ್ಷದ ಶಾಸಕರು ಎಲ್ಲವನ್ನೂ ಅಧಿಕಾರಿಗಳ ವಿವೇಚನೆಗೆ ಬಿಟ್ಟು ಮೌನಕ್ಕೆ ಶರಣಾಗಿರುವುದು ಯಾಕೆ ಎಂದು ನೆರವಂಡ ಉಮೇಶ್ ಪ್ರಶ್ನಿಸಿದ್ದಾರೆ.
ಜಿಲ್ಲೆಯ ಆಚಾರ ವಿಚಾರಗಳ ಬಗ್ಗೆ ಹೊರಗಿನಿಂದ ಬಂದಿರುವ ಅಧಿಕಾರಿಗಳಿಗೆ ತಿಳಿದಿರುವುದಿಲ್ಲ. ಈ ರೀತಿಯ ಸಂದರ್ಭಗಳಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನಪರವಾದ ನಿಲುವುಗಳನ್ನು ಕೈಗೊಳ್ಳಲು ಅಧಿಕಾರಿಗಳ ಮನವೊಲಿಸುವ ಕಾರ್ಯ ಮಾಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಜಿಲ್ಲಾಡಳಿತ ಮಡಿಕೇರಿ ದಸರಾ ಆಚರಣೆ ಕುರಿತು ತನ್ನ ನಿರ್ಧಾರವನ್ನು ಬದಲಿಸಿ ಅ.23, 24 ಮತ್ತು 25 ರಂದು ಕರಗಗಳ ನಗರ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಆ ಮೂಲಕ ಕರಗ ಪೂಜೆಗಾಗಿ ದೇವಾಲಯಗಳಲ್ಲಿ ನೂಕುನುಗ್ಗಲು ಉಂಟಾಗುವುದನ್ನು ತಪ್ಪಿಸಬೇಕು ಎಂದು ಉಮೇಶ್ ಒತ್ತಾಯಿಸಿದ್ದಾರೆ.