ಕೋವಿಡ್ ಲಸಿಕೆ ಲಭ್ಯತೆಗೆ ಅಗತ್ಯ ಕ್ರಮ : ಪ್ರಧಾನಿ ಭರವಸೆ

October 21, 2020

ನವದೆಹಲಿ ಅ.21 : ದೇಶದ ಪ್ರತಿ ನಾಗರಿಕನಿಗೂ ಕೋವಿಡ್ -19 ಲಸಿಕೆ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.
ಇಂದು ಸಂಜೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಹಾಮಾರಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಜನತಾ ಕಫ್ರ್ಯೂನಿಂದ ಆರಂಭವಾಗಿ ಇದುವರೆಗೂ ನಾವು ಸಾಧಿಸಿದ ಪ್ರಗತಿ ಶ್ಲಾಘನೀಯ ಎಂದರು.
ಲಾಕ್ ಡೌನ್ ಅಂತ್ಯವಾಗಿದೆ. ಆದರೆ ಕೊರೋನಾ ಮುಕ್ತವಾಗಿಲ್ಲ. ಹೀಗಾಗಿ ನಾವು ಮತ್ತಷ್ಟು ಜವಾಬ್ದಾರಿಯಿಂದ ವರ್ತಿಸಬೇಕಿದೆ ಎಂದು ದೇಶವಾಸಿಗಳಲ್ಲಿ ಮನವಿ ಮಾಡಿದರು. ದೇಶದಲ್ಲಿ ಕೊರೋನಾ ಚೇತರಿಕೆ ಪ್ರಮಾಣ ಇಡೀ ವಿಶ್ವದಲ್ಲೇ ಅತ್ಯಧಿಕವಾಗಿದ್ದು, ಸಾವಿನ ಪ್ರಮಾಣ ಸಹ ಅತ್ಯಂತ ಕಡಿಮೆ ಇದೆ. ಭಾರತದಲ್ಲಿ ಕೊರೋನಾ ಗುಣಮುಖ ಪ್ರಮಾಣ ಶೇ.83ರಷ್ಟಿರುವುದು ನಮ್ಮ ಸಾಧನೆಯೇ ಸರಿ ಎಂದರು.
ಕೊರೋನಾ ಲಸಿಕೆ ಬರುವವರೆಗೂ ನಾವು ಜಾಗರೂಕರಾಗಿಬೇಕು. ಲಸಿಕೆಯನ್ನು ದೇಶದ ಪ್ರತಿಯೊಬ್ಬರಿಗೆ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು
ಜನತಾ ಕಫ್ರ್ಯೂ ಬಳಿಕ ಇಂದಿನವರೆಗೆ ಹಲವು ಸಂಕಷ್ಟಗಳನ್ನು ಎದುರಿಸಿದ್ದೇವೆ. ಕೊರೊನಾ ನಡುವೆ ಜೀವನ ನಿರ್ವಹಣೆಗಾಗಿ ಜನರು ಮನೆಯಿಂದ ಹೊರ ಬರುತ್ತಿದ್ದಾರೆ. ಲಾಕ್ ಡೌನ್ ತೆರವು ಆಗಿರಬಹುದು, ಆದರೆ ವೈರಸ್ ಹೋಗಿಲ್ಲ. ಕಳೆದ ಎಂಟು ದಿನಗಳಿಂದ ಕಾಪಾಡಿಕೊಂಡ ಸ್ಥಿತಿಯನ್ನು ಮುಂದೆ ಹಾಳು ಮಾಡಿಕೊಳ್ಳಬಾರದು. ಭಾರತದಲ್ಲಿ ಕೊರೊನಾ ಗುಣಮುಖ ಪ್ರಮಾಣ ಶೇ.83ರಷ್ಟಿದೆ.
ಅಭಿವೃದ್ಧಿ ರಾಷ್ಟ್ರಗಳಲ್ಲಿ ಕೊರೊನಾ ಮರಣ ಪ್ರಮಾಣ ಹೆಚ್ಚಿದ್ದು, ನಮ್ಮಲ್ಲಿ ಕಡಿಮೆ ಇದೆ. ದೇಶದ 2 ಸಾವಿರ ಲ್ಯಾಬ್ ಗಳಲ್ಲಿ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. 90 ಲಕ್ಷದಷ್ಟು ಬೆಡ್ ಗಳ ವ್ಯವಸ್ಥೆ ದೇಶದಲ್ಲಿದೆ. ಭಾರತದಲ್ಲಿ ನಾಗರೀಕರ ಜೀವ ಉಳಿಸುವಲ್ಲಿ ಸರ್ಕಾರ ಸಫಲವಾಗಿದೆ. ಇಂತಹ ಸಂದರ್ಭದಲ್ಲಿ ಜನರು ಬೇಜಾವಾಬ್ದಾರಿತನ ತೋರಿಸಬಾರದು. ನಿರ್ಲಕ್ಷ್ಯ ನಿಮ್ಮನ್ನು ಅಪಾಯಕ್ಕೆ ದೂಡಬಹುದು. ಭಾರತದಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘನೆ ಮಾಡಲಾಗ್ತಿದೆ. ಪೂರ್ಣ ಪ್ರಮಾಣದಲ್ಲಿ ಸಫಲತೆ ಸಿಗದೇ ಖುಷಿ ಪಡೋದು ಸರಿಯಲ್ಲ. ಕೆಲಸ ಪೂರ್ಣವಾಗದೇ ಸಂತೋಷಪಡೋದು ಒಳ್ಳೆಯದಲ್ಲ. ಕೊರೊನಾಗೆ ವ್ಯಾಕ್ಸಿನ್ ಸಿಗೋವರೆಗೂ ಎಲ್ಲ ನಿಯಮಗಳನ್ನ ಪಾಲಿಸಬೇಕು. ವಿದೇಶಗಳು ಸೇರಿದಂತೆ ದೇಶದಲ್ಲಿ ಕೊರೊನಾ ವ್ಯಾಕ್ಸಿನ್ ಗಾಗಿ ಸಂಶೋಧನೆಗಳು ನಡೆಯುತ್ತಿವೆ. ವ್ಯಾಕ್ಸಿನ್ ಸಿದ್ಧವಾದ ಕೂಡಲೇ ಅದನ್ನ ಪ್ರತಿ ದೇಶವಾಸಿಗೆ ಹೇಗೆ ತಲುಪಿಸಬೇಕು ಎಂಬುದರ ಬಗ್ಗೆ ಸರ್ಕಾರ ಕೆಲಸ ಮಾಡುತ್ತಿದೆ.
ಸದ್ಯ ಸಾಲು ಸಾಲು ಹಬ್ಬಗಳು ಬಂದಿದೆ. ಈ ಸಮಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಹಬ್ಬಗಳನ್ನು ಆಚರಿಸಿ. ಈ ಹಬ್ಬಗಳು ನಿಮ್ಮಲ್ಲಿ ಉತ್ಸಾಹ ಮತ್ತು ಸಂತೋಷವನ್ನು ತರಲಿ ಎಂದು ಆಶಿಸುತ್ತೇನೆ. ಹಾಗಾಗಿ ಮಾಸ್ಕ್ ಧರಿಸುವಿಕೆ ಸೇರಿದಂತೆ ಎಲ್ಲ ಕೊರೊನಾ ನಿಯಮಗಳನ್ನು ಪಾಲಿಸಿ ಎಂದು ಆಗ್ರಹಿಸುತ್ತೇನೆ. ಕೊರೊನಾ ತಡೆಯುವಲ್ಲಿ ಸರ್ಕಾರ ನಡೆಸುತ್ತಿರುವ ಶ್ರಮಕ್ಕೆ ಎಲ್ಲರೂ ಸಾಥ್ ನೀಡಬೇಕು.
ಇದೇ ವೇಳೆ ದೇಶದ ಜನತೆಗೆ ದಸರಾ, ನವರಾತ್ರಿ, ಈದ್, ಗುರುನಾನಕ, ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ನಿಯಮಗಳನ್ನು ಪಾಲಿಸುವಂತೆ ಜನತೆಗೆ ಸಲಹೆ ನೀಡಿದರು.