ಬೆಂಗಳೂರಿನ ಪ್ರಸಿದ್ಧವಾದ ರಾಗಿಗುಡ್ಡ ಆಂಜನೇಯನ ದೇವಾಲಯ

ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಈ ಆಂಜನೇಯನ ಗುಡಿಯು, ರಾಗಿಗುಡ್ಡ ದೇವಸ್ಥಾನವೆಂದೇ ಪ್ರಸಿದ್ಧವಾಗಿದೆ. ಎಡಭಾಗಕ್ಕೆ ಮಾರೇನ ಹಳ್ಳಿ, ಬಲಭಾಗಕ್ಕೆ ಸಾರಕ್ಕಿ, ಮುಂದೆ ತಾಯಪ್ಪನ ಹಳ್ಳಿ, ಅದರ ಪಕ್ಕದಲ್ಲಿ ಗುರಪ್ಪನ ಪಾಳ್ಯ – ಹೀಗೆ ಹೆಚ್ಚು ರಾಗಿ ಬೆಳೆಯುತ್ತಿದ್ದ ಗ್ರಾಮೀಣ ಪ್ರದೇಶ ಜಯನಗರದ ಒಂಭತ್ತನೆಯ ಬಡಾವಣೆಯಾಯಿತು. ತಾಯಪ್ಪನ ಹಳ್ಳಿ ಜಯನಗರ ಟಿ ಬ್ಲಾಕ್ ಆಗಿ ಬದಲಾಗುವ ವೇಳೆಗೆ ಅಲ್ಲೊಂದು ಬಿ.ಟಿ.ಎಸ್. ಬಸ್ ಡಿಪೋ ಬಂದಿತ್ತು. ಬಸ್ಸಿನ ಅನುಕೂಲವಿದ್ದದ್ದರಿಂದ ಬಡಾವಣೆ ಶೀಘ್ರದಲ್ಲಿ ಬೆಳೆಯಿತು. ಎಪ್ಪತ್ತರ ದಶಕದಲ್ಲಿ ಮೈಸೂರು ಹೌಸಿಂಗ್ ಬೋರ್ಡ್ ಇಲ್ಲಿ ಮನೆಗಳನ್ನು ಕಟ್ಟಿಸಿ ಹಂಚಿಕೆ ಮಾಡಿದ್ದ ಕಾರಣ ಸರ್ಕಾರಿ, ಸಾರ್ವಜನಿಕ ವಲಯದ ಕಾರ್ಖಾನೆ ಹಾಗೂ ಬ್ಯಾಂಕುಗಳು ಮತ್ತು ಇನ್ಶ್ಯೂರೆನ್ಸ್ ಕಂಪನಿಗಳ ನೌಕರವರ್ಗದವರು ಈ ಬಡಾವಣೆಯಲ್ಲಿ ನೆಲೆಸಲು ಸಾಧ್ಯವಾಯಿತು. ಪ್ರಮುಖವಾಗಿ ಹೆಚ್.ಎ.ಎಲ್. ಹಾಗೂ ಮೈಕೋ ಕಂಪನಿಗಳ ನೌಕರರು ರಾಗಿಗುಡ್ಡದ ಮೇಲಿದ್ದ ಮೂಲ ಆಂಜನೇಯನ ವಿಗ್ರಹಕ್ಕೆ ವ್ಯವಸ್ಥಿತ ಪೂಜೆ ನಡೆಯಲು ಅನುಕೂಲ ಮಾಡಿಕೊಟ್ಟರು.
ಇತಿಹಾಸ
ದೇವಸ್ಥಾನದ ಆಡಳಿತ ವರ್ಗದವರು ಹಾಗೂ ಇಲ್ಲಿನ ಹಳೆಯ ನಿವಾಸಿಗಳ ಬಾಯಿಮಾತಿನಲ್ಲಿ ಪ್ರಚಲಿತವಾಗಿರುವ ಕತೆಯೊಂದಿದೆ. ರಾಗಿ ಬೆಳೆಯುತ್ತಿದ್ದ ಹೊಲವೊಂದಕ್ಕೆ ಬೈರಾಗಿಯೊಬ್ಬ ಭಿಕ್ಷೆ ಕೇಳಲು ಹೋಗಿದ್ದನಂತೆ. ಸಾಮಾನ್ಯವಾಗಿ ಕೈಹಿಡಿತವಿದ್ದ ಅತ್ತೆಯೊಬ್ಬಳು ಇಂಥ ಬೈರಾಗಿಗಳಿಗೆ ಒಂದೆರಡು ಮುಷ್ಟಿ ಮಾತ್ರರಾಗಿ ಕೊಡುತ್ತಿದ್ದಳಂತೆ. ಅತ್ತೆ ಇಲ್ಲದ ದಿನ ಬಂದ ಬೈರಾಗಿಗೆ, ಸೊಸೆ ಮೊರದ ತುಂಬ ರಾಗಿ ದಾನವಾಗಿ ನೀಡಿದ ಸಂದರ್ಭದಲ್ಲಿ ಅತ್ತೆಯ ಕಣ್ಣಿಗೆ ಬಿದ್ದು, ಅದನ್ನು ಆಕೆ ಮರುಕಸಿದಳಂತೆ. ಬೈರಾಗಿ ರೂಪದಲ್ಲಿದ್ದ ದೇವರು ಪ್ರತ್ಯಕ್ಷನಾಗಿ ಇಡೀ ರಾಗಿಯ ಬಣವೆ ಕಲ್ಲಾಗಲಿ ಎಂದು ಶಾಪ ನೀಡಿದನಂತೆ. ಆ ಗುಡ್ಡ ಹಾಗೂ ಸುತ್ತಲ ಶಿಲಾ ಪ್ರದೇಶಕ್ಕೆ ರಾಗಿಗುಡ್ಡ ಎಂಬ ಹೆಸರು ಬಂತು ಎನ್ನುವ ನಂಬಿಕೆಯಿದೆ.

