ಪತ್ರಕರ್ತ ರಮೇಶ್ ಉತ್ತಪ್ಪ ಅವರ “ಮತಭಿಕ್ಷೆ’’ ಕೃತಿ ಬಿಡುಗಡೆ

ಮೈಸೂರು: ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರ 25ನೇ ಕೃತಿ ಮಂಡ್ಯ ಲೋಕಸಭಾ ಚುನಾವಣೆ 2019 ಕುರಿತ
ಮತಭಿಕ್ಷೆ’’ ಮೈಸೂರಿನ ಪತ್ರಕರ್ತರ ಭವನದಲ್ಲಿ ಬಿಡುಗಡೆಯಾಯಿತು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ತನು ಮನು ಪ್ರಕಾಶನದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು,
ಇತರ ಸಾಹಿತ್ಯ ಪ್ರಕಾರಗಳಂತೆ ಪ್ರಜಾಪ್ರಭುತ್ವದ ಉಸಿರಾಗಿರುವ ರಾಜಕೀಯದ ಕುರಿತಾಗಿಯೂ ಸಾಹಿತ್ಯ ರಚನೆಯಾಗಬೇಕು. ಅಂತಹ ವೇದಿಕೆಯನ್ನು ಸೃಷ್ಟಿಸಲು ರಾಜಕೀಯ ಅಕಾಡೆಮಿ ಸ್ಥಾಪಿಸಬೇಕೆಂದು ಅಭಿಪ್ರಾಯಪಟ್ಟರು.ಪ್ರಜಾಪ್ರಭುತ್ವದಲ್ಲಿ ರಾಜಕಿಯವೇ ಉಸಿರಾಗಿದ್ದು ಅದು ಮಾಲಿನವಾಗದಂತೆ ನೋಡಿಕೊಳ್ಳಬೇಕಾದರೆ ರಾಜಕಾರಣದ ಬಗ್ಗೆ ಹೆಚ್ಚಾಗಿ ಸಾಹಿತ್ಯ ರಚನೆಯಾಗಬೇಕು. ಶಿಶು ಸಾಹಿತ್ಯ, ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ, ಶರಣ ಸಾಹಿತ್ಯವಿದೆ. ರಾಜಕೀಯ ಸಾಹಿತ್ಯವೇಕೆ ಇಲ್ಲ. ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿಯೂ ಒಂದು ಗೋಷ್ಠಿಯಾಗಿ ರಾಜಕೀಯ ವಿಚಾರವನ್ನು ಪ್ರಸ್ತಾಪಿಸುವುದಿಲ್ಲ. ರಾಜಕೀಯ ವ್ಯವಸ್ಥೆಯಿಂದಲೇ ಹಣ ಪಡೆದು ಆಯೋಜನೆಗೊಳ್ಳುವ ಸಾಹಿತ್ಯ ಸಮ್ಮೇಳನದಲ್ಲಿ ರಾಜಕೀಯ ವಿಚಾರವನ್ನು ನಿರ್ಲಕ್ಷಿಸಲಾಗುತ್ತಿದೆ. ಮಾತ್ರವಲ್ಲದೆ ಸಮಾಜದಲ್ಲಿ ಈ ರೀತಿ ಹಾಸುಹೊಕ್ಕಾಗಿರುವ ರಾಜಕೀಯ ವಿಚಾರದ ಬಗ್ಗೆ ಸಾಹಿತ್ಯ ರಚನೆಗೆ ವೇದಿಕೆಯಾಗಿ ರಾಜಕೀಯ ಅಕಾಡೆಮಿ ಸ್ಥಾಪಿಸಬೇಕು'' ಎಂದು ಮನವಿ ಮಾಡಿದರು.
ಕಳೆದ ಬಾರಿಯ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರವು ಪಕ್ಷಾಂತರದಿಂದ ಪಥನಗೊಂಡಿಲ್ಲ. ತಮ್ಮ ಪಕ್ಷಗಳ ವಿರುದ್ಧ ನಾಯಕರು ದಂಗೆ ಎದ್ದಿದ್ದೆ ಇದಕ್ಕೆ ಕಾರಣ. ಈ ಬಗ್ಗೆ ಸೂಕ್ತ ವಿಶ್ಲೇಷಣೆ ನೀಡಲೆಂದೆ ನಾನು ದಿ ಬಾಂಬೆ ಡೇಸ್ ಎಂಬ ಪುಸ್ತಕ ಬರೆಯುತ್ತಿದ್ದೇನೆ. ಈ ನಿರ್ಧಾರ ಕೈಗೊಂಡಿರುವುದಕ್ಕೆ ಹಾಗೂ ನನಗೆ ಸಾಹಿತಿ ಕೊಟಾದಡಿಯಲ್ಲಿ ಶಾಸಕ ಸ್ಥಾನ ದೊರೆತಿರುವುದಕ್ಕೆ ನನ್ನ ಮೇಲೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಾಗಿದೆ. ನಾನು ಕಾಗಕ್ಕ ಗೂಬಕ್ಕನ ಕಥೆ ಬರೆದವನಲ್ಲ, ರಾಜಕೀಯದ ಹುಟ್ಟು, ಚುನಾವಣೆ ಎಂದರೇನು ಎಂಬುದನ್ನು ಸೇರಿದಂತೆ ಗಹನವಾದ ರಾಜಕೀಯ ವಿಚಾರಗಳನ್ನು ಸಾಹಿತ್ಯ ರೂಪಕ್ಕಿಳಿಸಿದ್ದೇನೆ. ಇದೂ ಕೂಡ ಸಾಹಿತ್ಯ ರಚನೆಯಲ್ಲವೇ“ ಎಂದು ಪ್ರಶ್ನಿಸಿದರು.
ಮೈಸೂರು ವಿವಿ ಪತ್ರಿಕೋದ್ಯಮ ಹಾಗೂ ಸಂವಹನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ನಿರಂಜನವಾನಳ್ಳಿ ಪುಸ್ತಕದ ಕುರಿತು ಮಾತನಾಡಿದರು. ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾಧ್ಯಕ್ಷ ಸಿ.ಕೆ. ಮಹೇಂದ್ರ, ತನು ಮನು ಪ್ರಕಾಶನ ಮಾಲೀಕ ಮಾನಸ, ಕೃತಿ ಲೇಖಕ ಐತಿಚಂಡ ರಮೇಶ್ ಉತ್ತಪ್ಪ ಹಾಜರಿದ್ದರು.

