ಪಾಡಿ ಶ್ರೀಇಗ್ಗುತ್ತಪ್ಪ ದೇವಾಲಯದಲ್ಲಿ ರಾಶಿ ತೀರ್ಮಾನ

21/10/2020

ಮಡಿಕೇರಿ ಅ. 21 : ಪಾಡಿ ಶ್ರೀಇಗ್ಗುತ್ತಪ್ಪ ಭಕ್ತಜನ ಸಂಘ, ದೇವಾಲಯ ವ್ಯವಸ್ಥಾಪನಾ ಸಮಿತಿ, ಅಮ್ಮಂಗೇರಿ ಜೋತಿಷ್ಯರು ಹಾಗೂ ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ಪಾಡಿ ಶ್ರೀಇಗ್ಗುತ್ತಪ್ಪ ದೇವಾಲಯದಲ್ಲಿ ರಾಶಿ ತೀರ್ಮಾನ ನಡೆಸಲಾಯಿತು.
ಪೌಳಿ ಕಟ್ಟಡವು ಕಳಶಕ್ಕಿಂತ ಎತ್ತರ ಬರುವುದು ಶಾಸ್ತ್ರ ನೋಡಿದ ಪ್ರಕಾರ ಸರಿಯಲ್ಲವೆಂದು ತಿಳಿದು ಬಂದಿದ್ದು, ಮಿತಿ ಮೀರಿ ಕಟ್ಟಿದರೆ ಇದರಿಂದ ಅನಾಹುತ ತಪ್ಪಿದ್ದಲ್ಲ. ಕಟ್ಟಡವು ಕಳಶಕ್ಕಿಂತ ಕೆಳಗೆ ಇರಬೇಕೆಂದು ರಾಶಿಯಲ್ಲಿ ತಿಳಿದು ಬಂತು. ದೇವರು ಪ್ರದಕ್ಷಿಣೆ ಬಂದು ಅನುವಾದ ಕೊಡುವ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡುವುದು ಕೂಡ ಸರಿಯಾದ ಕ್ರಮವಲ್ಲ. ದೇವರು ಮಲ್ಮಕ್ಕೆ ಹೋಗುವ ದಾರಿಯಲ್ಲಿ ಕಟ್ಟಡ ನಿರ್ಮಾಣ ಮಾಡುವ ಬಗ್ಗೆಯೂ ಸಂಪೂರ್ಣ ತೃಪ್ತಿ ಇಲ್ಲದ್ದರಿಂದ ಕಟ್ಟಡ ನಿರ್ಮಿಸುವುದು ಸರಿಯಿಲ್ಲ ಎನ್ನುವ ಮಾಹಿತಿ ಲಭ್ಯವಾಯಿತು.
ದೇವಸ್ಥಾನದ ಮುಂಭಾಗ ಈಗಾಗಲೇ ನಿರ್ಮಾಣಗೊಂಡಿರುವ ಮೆಟ್ಟಿಲುಗಳು ಹಾಗೇ ಇರಬಹುದೆಂದು ತಿಳಿದು ಬಂತು. ಪುತ್ತರಿ ಹಬ್ಬದ ದಿನ ಕದಿರು ತೆಗೆಯುವ ಬಗ್ಗೆ ದೇವತಕ್ಕರು ಪ್ರಸ್ತಾಪ ಮಾಡಿದಾಗ ಇಲ್ಲಿಯವರೆಗೆ ಯಾವ ರೀತಿ ಪದ್ಧತಿ ನಡೆದುಕೊಂಡು ಬಂದಿದೆಯೋ ಅದನ್ನು ಹಾಗೇ ಮುಂದುವರೆಸುವುದು ಸೂಕ್ತ ಎಂದು ತಿಳಿದು ಬಂತು.
ದೇವಸ್ಥಾನದ ಗರ್ಭಗುಡಿಯ ತಾಮ್ರದ ತಗಡಿಗೆ ಚಿನ್ನದ ಲೇಪನ ಮಾಡುವ ಬಗ್ಗೆ ತಂತ್ರಿಗಳ ಅನುಮತಿ ಪಡೆದು ಕೆಲಸ ಮುಂದುವರೆಸುವುದು.
ಮುಂದಿನ ದಿನಗಳಲ್ಲಿ ದೇವಸ್ಥಾನದಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಶ್ರೀಇಗ್ಗುತ್ತಪ್ಪ ದೇವರ ಜ್ಯೋತಿಷ್ಯರನ್ನು ಕರೆಸಿ, ನಾಡಿನ 13 ತಕ್ಕ ಮುಖ್ಯಸ್ಥರ ಕುಟುಂಬದವರನ್ನು ಹಾಗೂ ನಾಡಿನ ಹಿರಿಯರನ್ನು ಸೇರಿಸಿ ಅವರ ಅಭಿಪ್ರಾಯ ಪಡೆದು ನಡೆಸಲು ನಿರ್ಧರಿಸಲಾಯಿತು.
ಪಾಡಿ ಶ್ರೀಇಗ್ಗುತ್ತಪ್ಪ ಭಕ್ತ ಜನ ಸಂಘದ ಅಧ್ಯಕ್ಷ ಕಾಂಡಂಡ ಬಿ.ಜೋಯಪ್ಪ, ಉಪಾಧ್ಯಕ್ಷ ಪರದಂಡ ಡಾಲಿ, ಖಚಾಂಚಿ ನಂಬುಡುಮಾಡ ಸುಬ್ರಮಣಿ, ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಚಮಂಡ ಲವಚಿಣ್ಣಪ್ಪ, ಎಲ್ಲಾ ತಕ್ಕ ಮುಖ್ಯಸ್ಥರು, ಸಮಿತಿ ಸದಸ್ಯರು ಹಾಗೂ ಭಕ್ತರು ಈ ಸಂದರ್ಭ ಹಾಜರಿದ್ದರು.