ತಲಕಾವೇರಿಯಲ್ಲಿ ಕಾವೇರಿ ನದಿ ಜಾಗೃತಿ ತೀರ್ಥಯಾತ್ರೆಗೆ ಚಾಲನೆ

22/10/2020

ಮಡಿಕೇರಿ ಅ. 22 : ನದಿ ತಟಗಳ ಸುರಕ್ಷತೆ ಮತ್ತು ಸಂರಕ್ಷಣೆಯ ಕರ್ತವ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಅಖಿಲ ಭಾರತ ಸನ್ಯಾಸಿಗಳ ಸಂಘದ ಸ್ಥಾಪಕ ಉಪಾಧ್ಯಕ್ಷ ಶ್ರೀ ರಮಾನಂದ ಸ್ವಾಮೀಜಿ ಕರೆ ನೀಡಿದ್ದಾರೆ.
ಅಖಿಲ ಭಾರತ ಸನ್ಯಾಸಿಗಳ ಸಂಘ, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ 10ನೇ ವರ್ಷದ ಕಾವೇರಿ ನದಿ ಜಾಗೃತಿ ತೀರ್ಥಯಾತ್ರೆಗೆ ತಲಕಾವೇರಿ ಕ್ಷೇತ್ರದಲ್ಲಿ ಚಾಲನೆ ನೀಡಿ ಮಾತನಾಡಿದರು.
ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸುವುದು, ನದಿಯ ಪಾವಿತ್ರ್ಯತೆ ಉಳಿಸುವ ನಿಟ್ಟಿನಲ್ಲಿ ಜನರನ್ನು ಜಾಗೃತರಾಗಿಸುವುದು ಕಳೆದ 9 ವರ್ಷಗಳಿಂದ ನಿರಂತರವಾಗಿ ಯಾತ್ರೆ ಮೂಲಕ ನಡೆಯುತ್ತಿದೆ. ಸಪ್ತ ನದಿಗಳಲ್ಲಿ ಕಾವೇರಿ ಶ್ರೇಷ್ಠ ನದಿಯಾಗಿದ್ದು ತುಲಾ ಮಾಸದ ಒಂದು ತಿಂಗಳ ಅವಧಿಯಲ್ಲಿ ಗಂಗೆ ಕಾವೇರಿ ಪ್ರವೇಶವಾಗುತ್ತಿದ್ದು ಈ ಸಂದರ್ಭ ಕಾವೇರಿಯಲ್ಲಿ ಸ್ನಾನ ಮಾಡಿದ ಜನರ ಪಾಪ ಪರಿಹಾರ ಸಾಧ್ಯ ಎನ್ನುವ ಪ್ರತೀತಿಯಿದೆ. ತಲಕಾವೇರಿಯಿಂದ ಪೂಂಪ್‍ಹಾರ್ ತನಕ ನದಿ ತಟದಲ್ಲಿ 20 ದಿನಗಳ ತನಕ ಯಾತ್ರೆ ನಡೆಯಲಿದ್ದು ನವೆಂಬರ್ 7 ರಂದು ಪೂಂಪ್‍ಹಾರ್‍ನಲ್ಲಿ ಕಾವೇರಿ ಸಮುದ್ರ ಸಂಗಮವಾಗುವ ಬಂಗಾಳಕೊಲ್ಲಿಯಲ್ಲಿ ಕಳಶದಲ್ಲಿ ಒಯ್ಯುವ ಪವಿತ್ರ ಕಾವೇರಿ ಜಲವನ್ನು ವಿಸರ್ಜನೆ ಮಾಡಲಾಗುವುದು ಎಂದು ತಿಳಿಸಿದರು. ಈ ಬಾರಿ ಕೋವಿಡ್-19 ಹಿನ್ನಲೆಯಲ್ಲಿ ಸಾಂಕೇತಿಕವಾಗಿ ಯಾತ್ರೆ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಯಾತ್ರೆಗೆ ಶುಭ ಕೋರಿದ ತಲಕಾವೇರಿ ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯ ಮಾತನಾಡಿ, ಜನರಲ್ಲಿ ಜಾಗೃತಿ ಮೂಡಿಸಲು ನಿರಂತರ ಶ್ರಮಿಸುತ್ತಿರುವ ಸ್ವಚ್ಚತಾ ಅಭಿಯಾನದ ಪ್ರಮುಖರು ಯಾತ್ರೆಯ ಉದ್ದೇಶ ಜನರ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎನ್ನುವ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನಿಸಬೇಕು. ಮೂಲ ಕಾವೇರಿಯಿಂದ ಸಾಗುವ ತೀರ್ಥಯಾತ್ರೆ ಸಾಗುವ ಕಡೆಗಳಲ್ಲಿ ಎಲ್ಲಾ ರೀತಿಯಲ್ಲಿ ಯಶಸ್ಸು ಕಾಣಲಿ ಎಂದು ಹಾರೈಸಿದರು. ಈ ಸಂದರ್ಭ ಮಾತನಾಡಿದ ಕಾವೇರಿ ನದಿ ಸ್ವಚ್ಚತಾ ಅಭಿಯಾನದ ರಾಜ್ಯ ಸಂಚಾಲಕ ಎಂ.ಎನ್.ಚಂದ್ರಮೋಹನ್, ಕಾವೇರಿ ಕ್ಷೇತ್ರದಲ್ಲಿ ಸ್ವಚ್ಚವಾಗಿ ಸೃಷ್ಠಿಯಾಗುವ ಜೀವಜಲವನ್ನು ನದಿ ಹರಿಯುವ ಎಲ್ಲಾ ಕಡೆಗಳಲ್ಲಿಯೂ ಸಂರಕ್ಷಿಸುವ ಮೂಲಕ ನದಿಯ ಪಾವಿತ್ರ್ಯತೆ ಕಾಪಾಡಬೇಕು. ಆ ನಿಟ್ಟಿನಲ್ಲಿ ಯಾತ್ರೆ ರಾಜ್ಯ ಮತ್ತು ತಮಿಳುನಾಡಿನ ನೂರಾರು ಕಡೆ ತಟಗಳಲ್ಲಿ ಜನರಿಗೆ ಅರಿವು ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿದೆ. ನದಿ ಸಂರಕ್ಷಣೆಗೆ ಕಾನೂನು ರೂಪುಗೊಳ್ಳುವುದರೊಂದಿಗೆ ಅದರ ಅನುಷ್ಠಾನವನ್ನು ಮಾಡುವಲ್ಲಿ ಕೇಂದ್ರ, ರಾಜ್ಯ ಸರಕಾರಗಳು ಕೂಡಲೆ ಯೋಜನೆ ರೂಪಿಸಬೇಕು ಎಂದರು.
ಇದಕ್ಕೂ ಮುನ್ನ ಸಾಧುಸಂತರು ರಥಯಾತ್ರೆಯಲ್ಲಿ ತಂಡ ಕಾವೇರಿ ಮಾತೆಯ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಪವಿತ್ರ ತೀರ್ಥವನ್ನು 5 ಕಲಶಗಳಲ್ಲಿ ತುಂಬಿ ರಥದಲ್ಲಿ ಕೊಂಡೊಯ್ದರು.
ಭಾಗಮಂಡಲ ಸಂಗಮದಲ್ಲಿ ವಿಶೇಷ ಆರತಿ ಕಾರ್ಯಕ್ರಮದೊಂದಿಗೆ ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರಥ ಮಡಿಕೇರಿ ಮೂಲಕ ಕುಶಾಲನಗರಕ್ಕೆ ಸಾಗಿತು.
ತಲಕಾವೇರಿ ಕ್ಷೇತ್ರದಲ್ಲಿ ನಡೆದ ಪ್ರಕೃತಿ ವಿಕೋಪದಿಂದ ಮಡಿದ ಹಿರಿಯ ಅರ್ಚಕರಾದ ನಾರಾಯಣಾಚಾರ್, ಆನಂದತೀರ್ಥ ಸ್ವಾಮೀಜಿ ಮತ್ತಿತರರ ಆತ್ಮಕ್ಕೆ ಚಿರಶಾಂತಿ ಕೋರಿ ಸಾಧುಸಂತರ ತಂಡ ಪುಷ್ಪಾರ್ಚನೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು.
ಈ ಸಂದರ್ಭ ಅಖಿಲ ಭಾರತ ಸನ್ಯಾಸಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸ್ವಾಮಿ ಆತ್ಮಾನಂದ, ಪ್ರಮುಖರಾದ ಅರುಳ್ ವೀರಮಣಿ, ಗುರುಸ್ವಾಮಿ ಮತ್ತು ನದಿ ಸ್ವಚ್ಚತಾ ಅಭಿಯಾನದ ಪ್ರಮುಖರು ಇದ್ದರು.