ನಮಾಮಿ ಕಾವೇರಿ ಸಂಚಿಕೆ ಬಿಡುಗಡೆ ಕಾರ್ಯಕ್ರಮ : ಸಾಧು ಸಂತರಿಂದ ಕಾವೇರಿ ನದಿಗೆ ವಿಶೇಷ ಆರತಿ

22/10/2020

ಕುಶಾಲನಗರ ಅ. 22 : ಮಡಿ ಮೈಲಿಗೆಯ ಕನಿಷ್ಠ ಆಚರಣೆಯ ಅವಶ್ಯಕತೆಯಿದೆ ಎಂದು ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದಲ್ಲಿ ಕಾವೇರಿ ನದಿ ಸ್ವಚ್ಚತಾ ಆಂದೋಲನ ಮತ್ತು ಕಾವೇರಿ ಮಹಾ ಆರತಿ ಬಳಗ ಆಶ್ರಯದಲ್ಲಿ ನಮಾಮಿ ಕಾವೇರಿ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿ, ಸ್ವಚ್ಚತೆಯ ಕೊರತೆ ವಿಶ್ವವನ್ನೇ ತಲ್ಲಣಗೊಳಿಸುತ್ತಿದೆ. ಆಚರಣೆಯ ಮೂಲಕ ಸದ್ಭಾವನೆ ಮುಖ್ಯವಾಗಿದ್ದು ಸ್ವಚ್ಚತೆಗೆ ಪ್ರತಿಯೊಬ್ಬರೂ ಆದ್ಯ ಗಮನ ಹರಿಸಬೇಕಾಗಿದೆ ಎಂದರು.
ಕಾವೇರಿ ಮೂಲ ಕ್ಷೇತ್ರದಲ್ಲಿ ಪ್ರತಿಷ್ಠೆಗಾಗಿ ಹೋರಾಟ ನಡೆಯುವುದು ಸಲ್ಲದು ಎಂದ ರಾಜೇಂದ್ರ ಅವರು, ಪ್ರತಿಯೊಬ್ಬರಿಗೂ ನೈಜ ಭಕ್ತಿಯ ಅವಶ್ಯಕತೆಯಿದೆ. ತನ್ನನ್ನೇ ತ್ಯಾಗ ಮಾಡಿರುವ ಕಾವೇರಿಯ ಪಾವಿತ್ರ್ಯತೆಯನ್ನು ಕಾಪಾಡುವ ಯೋಗ್ಯತೆ ಪ್ರತಿಯೊಬ್ಬರಲ್ಲಿ ಇರಬೇಕಾಗಿದೆ. ಕ್ಷೇತ್ರಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಶಾಶ್ವತ ಪರಿಹಾರ ಅಗತ್ಯ. ಈಗಾಗಲೆ ಅನಾಹುತಗಳು ಸಂಭವಿಸುತ್ತಿದ್ದು, ಮತ್ತೆ ದುರಂತಗಳು ಮರುಕಳಿಸದಂತೆ ಎಚ್ಚರ ಅಗತ್ಯ ಎಂದರು.
ಮಹಾ ಶಕ್ತಿಗೆ ಕೃತಜ್ಞತೆ ಸಲ್ಲಿಸುವುದರೊಂದಿಗೆ ಕೊಡವರ ಕುಲದೇವಿ ಇತರರ ಆರಾಧ್ಯ ದೈವಾಗಿರುವ ತಲಕಾವೇರಿ-ಭಾಗಮಂಡಲ ಕ್ಷೇತ್ರದಲ್ಲಿ ಜಿಲ್ಲಾಮಟ್ಟದ ಸಮಿತಿಯೊಂದು ರಚನೆಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅರ್ಜಿ ಅಥವಾ ರಾಜಕೀಯ ಮೂಲಕ ದೇವಾಲಯ ಸಮಿತಿ ರಚನೆ ಸಲ್ಲದು ಎಂದ ರಾಜೇಂದ್ರ ಅವರು ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉನ್ನತ ಅಧಿಕಾರಿಗಳು ಸರಕಾರ ತಲಕಾವೇರಿ-ಭಾಗಮಂಡಲ ಕ್ಷೇತ್ರವನ್ನು ನಿರ್ಲಕ್ಷಿಸಿರುವುದಾಗಿ ತಿಳಿಸಿದ ರಾಜೇಂದ್ರ ಅವರು ಧಾರ್ಮಿಕ ಭಾವನೆಯುಳ್ಳ ಜನರ ಅಗತ್ಯವಿದೆ ಎಂದರು.
ತಲಕಾವೇರಿ ದೇವಸ್ಥಾನಕ್ಕೆ ಪ್ರಾಧಿಕಾರ ರಚನೆ ಮಾಡುವ ಮೂಲಕ ಕ್ಷೇತ್ರದಲ್ಲಿ ನೆಮ್ಮದಿ ಸೃಷ್ಠಿಯಾಗಬೇಕೆಂದು ಅವರು ಹೇಳಿದರು.
ಈ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು ಕಾರ್ಯೋನ್ಮುಖರಾಗಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಈ ಬಗ್ಗೆ ಸರಕಾರದ ಗಮನ ಸೆಳೆಯಲಾಗುವುದು ಎಂದು ಭರವಸೆ ನೀಡಿದರು.
ಕುಶಾಲನಗರ ವ್ಯಾಪ್ತಿಯಲ್ಲಿ ಕಳೆದ ಮೂರು ವರ್ಷಗಳಿಂದ ಕಾವೇರಿ ಪ್ರವಾಹ ಬಂದು ಜನಜೀವನ ಅಸ್ತವ್ಯಸ್ತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಗೆ ತಡೆಗೋಡೆ ನಿರ್ಮಾಣಕ್ಕೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಹಂತಹಂತವಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು.
ಕಳೆದ ಹಲವು ವರ್ಷಗಳಿಂದ ಸ್ವಚ್ಚತಾ ಆಂದೋಲನ ಕಾರ್ಯಕ್ರಮಗಳ ಮೂಲಕ ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಶೇ.60 ರಷ್ಟು ಸ್ವಚ್ಚತೆ ಕಾಣುತ್ತಿರುವ ಬಗ್ಗೆ ಶಾಸಕ ಅಪ್ಪಚ್ಚುರಂಜನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿ, ಪವಿತ್ರ ನದಿಗಳು ಅವೈಜ್ಞಾನಿಕ ಬೆಳವಣಿಗೆಯಿಂದ ಹೆಚ್ಚಿನ ಮಟ್ಟದಲ್ಲಿ ಕಲುಷಿತಗೊಳ್ಳುತ್ತಿವೆ. ಸೃಷ್ಠಿ ಮಾಡಲು ಸಾಧ್ಯವಿಲ್ಲದ ಪ್ರಕೃತಿಯ ಬಗ್ಗೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕಾಗಿದೆ. ನೇರ ಕಲುಷಿತ ತ್ಯಾಜ್ಯ ನದಿಗೆ ಬಿಡುವ ಮೂಲಕ ಅಪವಿತ್ರ ಆಗದಂತೆ ನೋಡಿಕೊಳ್ಳುವುದು ಜವಾಬ್ದಾರಿಯಾಗಿದೆ ಎಂದರು.
ಈ ಸಂದರ್ಭ ಕುಶಾಲನಗರದಲ್ಲಿ ಪ್ರತಿ ಹುಣ್ಣಿಮೆಯಂದು ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜಾ ಕಾರ್ಯಕ್ರಮ ನೆರವೇರಿಸಿದ ಹಿರಿಯ ಅರ್ಚಕರಾದ ಕೃಷ್ಣಮೂರ್ತಿ ಭಟ್, ಪೌರ ಕಾರ್ಮಿಕರಾದ ಗಣೇಶ್, ಪುರುಷೋತ್ತಮ, ನಮಾಮಿ ಕಾವೇರಿ ಸಂಚಿಕೆ ಸಂಪಾದಕೀಯ ಮಂಡಳಿಯ ಎಚ್.ಟಿ.ಅನಿಲ್, ಬಿ.ಸಿ.ದಿನೇಶ್, ವಿನೋದ್, ಬಿ.ಎಂ.ಲತೀಶ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಂ.ಎನ್.ಚಂದ್ರಮೋಹನ್ ಪ್ರಾಸ್ತಾವಿಕ ನುಡಿಗಳಾಡಿದರು.
ಈ ಸಂದರ್ಭ ಜಿಪಂ ಸದಸ್ಯೆ ಮಂಜುಳಾ, ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಪಪಂ ಸದಸ್ಯರಾದ ಜಯವರ್ಧನ್, ಅಮೃತ್‍ರಾಜ್, ಕುಡಾ ಸದಸ್ಯರಾದ ವಿ.ಡಿ.ಪುಂಡರೀಕಾಕ್ಷ, ವೈಶಾಖ್, ಸನ್ಯಾಸಿ ಸಂಘದ ಪ್ರಮುಖರಾದ ಆತ್ಮಾನಂದ ಸ್ವಾಮೀಜಿ, ಅರುಳ್ ವೀರಮಣಿ, ವನಿತಾ ಚಂದ್ರಮೋಹನ್, ಎಂ.ಎನ್.ಕುಮಾರಸ್ವಾಮಿ, ಡಿ.ಆರ್.ಸೋಮಶೇಖರ್, ಬಿಜೆಪಿ ನಗರಾಧ್ಯಕ್ಷ ವಿ.ಎನ್.ಉಮಾಶಂಕರ್ ಮತ್ತಿತರರು ಇದ್ದರು.
ಕಾವೇರಿ ತೀರ್ಥಯಾತ್ರಾ ತಂಡದ ಸಾಧುಸಂತರು ಮತ್ತು ಗಣ್ಯರು ನದಿಗೆ ವಿಶೇಷ ಆರತಿ ಬೆಳಗಿ ಪೂಜೆ ಸಲ್ಲಿಸಿದರು.