ಕೋವಿಡ್ ನೆಪದಲ್ಲಿ ಸೂತಕದ ಛಾಯೆ ಮೂಡಿಸಿದ ಜಿಲ್ಲಾಡಳಿತ : ಕೊಡಗು ಜೆಡಿಎಸ್ ಟೀಕೆ

October 22, 2020

ಮಡಿಕೇರಿ ಅ.22 : ಕೋವಿಡ್ ಮಾರ್ಗಸೂಚಿಯ ನೆಪವೊಡ್ಡಿ ನೂರಾರು ವರ್ಷಗಳ ಇತಿಹಾಸವಿರುವ ದಸರಾ ಮಹೋತ್ಸವಕ್ಕೆ ನಿರ್ಬಂಧ ಹೇರುವ ಮೂಲಕ ಜಿಲ್ಲಾಡಳಿತ ಮಡಿಕೇರಿ ನಗರದಲ್ಲಿ ಸೂತಕದ ಛಾಯೆಯನ್ನು ಮೂಡಿಸಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಮೈಸೂರು, ಮಂಗಳೂರು ಸೇರಿದಂತೆ ವಿವಿಧೆಡೆ ದಸರಾ ಸಂಭ್ರಮ ಮನೆ ಮಾಡಿದ್ದು, ವಿದ್ಯುತ್ ದೀಪಾಲಂಕಾರದಿಂದ ನಗರಗಳು, ಸರ್ಕಾರಿ ಕಟ್ಟಡಗಳು ಕಂಗೊಳಿಸುತ್ತಿವೆ. ಆದರೆ ಮಡಿಕೇರಿ ನಗರ ಮಾತ್ರ ಜಿಲ್ಲಾಡಳಿತದ ಅಸಹಕಾರ ಮತ್ತು ನಿರ್ಬಂಧಗಳಿಂದ ಕಳೆಗುಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದಸರಾ ಹಿಂದೂಗಳ ಹಬ್ಬವಾದರೂ ಎಲ್ಲಾ ಜಾತಿ, ಧರ್ಮದವರು ಸೇರಿ ಜನೋತ್ಸವವನ್ನು ವಿಜೃಂಭಣೆಯಿಂದ ನಡೆಸಲಾಗುತ್ತಿತ್ತು. 2018 ರಲ್ಲಿ ಅತಿವೃಷ್ಟಿಯಿಂದ ಅನಾಹುತಗಳು ನಡೆದರೂ ಸಾಂಪ್ರದಾಯಿಕ ಮಡಿಕೇರಿ ದಸರಾವನ್ನು ಯಾವುದೇ ಚ್ಯುತಿ ಇಲ್ಲದೆ ಜನಮೆಚ್ಚುಗೆ ಗಳಿಸುವ ರೀತಿಯಲ್ಲಿ ಆಚರಿಸಲಾಗಿದೆ. ಆದರೆ ಈ ಬಾರಿ ಜಿಲ್ಲಾಡಳಿತ ವಿನಾಕಾರಣ ಆತಂಕ ಸೃಷ್ಟಿ ಮಾಡಿ ಅರ್ಥಹೀನ ನಿಯಮಗಳನ್ನು ರೂಪಿಸಿ ಭಕ್ತರ ಭಾವನೆಗಳಿಗೆ ಅಡ್ಡಿಪಡಿಸುತ್ತಿದೆ. ಕೇವಲ ಸರ್ಕಾರಿ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಿರುವ ಜಿಲ್ಲಾಧಿಕಾರಿಗಳು ಕೊಡಗಿನ ಸಂಸ್ಕøತಿ, ಪರಂಪರೆ, ಆಚಾರ, ವಿಚಾರಗಳ ಆಚರಣೆಗೆ ಇಲ್ಲಸಲ್ಲದ ನೆಪವೊಡ್ಡುತ್ತಿದೆ.
ಹಿಂದುತ್ವದ ಆಧಾರದಲ್ಲಿ ಮತ ಗಳಿಸಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷದ ಶಾಸಕರುಗಳೇ ಜಿಲ್ಲೆಯಲ್ಲಿದ್ದರೂ ದಸರಾ ಅವ್ಯವಸ್ಥೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ಜವಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತಿನಿಧಿಗಳಾಗಿ ಸಾಂಪ್ರದಾಯಿಕ ದಸರಾ ಆಚರಣೆಗೂ ಕ್ರಮ ಕೈಗೊಳ್ಳುತ್ತಿಲ್ಲ. ಎಲ್ಲಾ ನಿರ್ಧಾರಗಳನ್ನು ಜಿಲ್ಲಾಧಿಕಾರಿಗಳ ವಿವೇಚನೆಗೆ ಬಿಡುತ್ತಿರುವ ಶಾಸಕರುಗಳು ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲವೆಂದು ಗಣೇಶ್ ಆರೋಪಿಸಿದರು.
ಶಾಸಕರುಗಳ ನಿರ್ಲಕ್ಷ್ಯದ ಬಗ್ಗೆ ಹಿಂದೂ ಸಂಘಟನೆಗಳು ಪ್ರಶ್ನೆ ಮಾಡುವ ಕಾಲ ಕೂಡಿ ಬಂದಿದೆ ಎಂದು ತಿಳಿಸಿರುವ ಅವರು, ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ನಡೆಯುವ ಸಂಪ್ರದಾಯಕ್ಕೆ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ಅಡ್ಡಿ ಪಡಿಸಬಾರದೆಂದು ಒತ್ತಾಯಿಸಿದರು.
ಅಂತಿಮ ದಿನ ಮಧ್ಯರಾತ್ರಿಯ ನಂತರವೇ ಕರಗಗಳು ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಮೂಲಕ ದಸರಾ ಹಬ್ಬಕ್ಕೆ ತೆರೆ ಎಳೆಯುವ ಸಂಪ್ರದಾಯವಿದೆ. ಆದರೆ ರಾತ್ರಿ 12 ಗಂಟೆಯೊಳಗೆ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಪೂರ್ಣಗೊಳಿಸಬೇಕೆಂದು ಜಿಲ್ಲಾಡಳಿತ ಆದೇಶ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಅವರು, ಶಾಸಕರುಗಳು ಮಧ್ಯ ಪ್ರವೇಶ ಮಾಡಿ ಇಲ್ಲಿನ ಸಂಪ್ರದಾಯದ ಬಗ್ಗೆ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಟ್ಟು ವಿಜಯದಶಮಿಯ ಆಚರಣೆಗೆ ಅವಕಾಶ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು. ಕೋವಿಡ್ ಮಾರ್ಗಸೂಚಿಯ ನೆಪವೊಡ್ಡಿ ಜನರನ್ನು ಕತ್ತಲೆಯಲ್ಲಿಡುವ ಕಾರ್ಯವನ್ನು ಜಿಲ್ಲಾಡಳಿತ ಮಾಡಬಾರದೆಂದರು.
ದಸರಾದಲ್ಲಿ ಪ್ರಮುಖ ಪಾತ್ರ ವಹಿಸುವ ನಗರದ ನಾಲ್ಕು ಶಕ್ತಿ ದೇವತೆಗಳ ದೇವಾಯಗಳಿಗೆ ಈ ಬಾರಿ ಸರ್ಕಾರ ಎಷ್ಟು ಅನುದಾನ ನೀಡಿದೆ ಎನ್ನುವುದನ್ನು ಜಿಲ್ಲಾಡಳಿತ ಬಹಿರಂಗ ಪಡಿಸಬೇಕು. ಒಂದು ವೇಳೆ ಹಣ ಬಿಡುಗಡೆಯಾಗದೆ ಇದ್ದರೆ ಆಯಾ ದೇವಾಲಯ ಸಮಿತಿಗಳು ಧ್ವನಿ ಎತ್ತಿ ಕೇಳಬೇಕು ಎಂದು ಅವರು ಮನವಿ ಮಾಡಿದರು.
ಪ್ರತಿವರ್ಷ ದಸರಾ ನೆಪದಲ್ಲಾದರೂ ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗುತ್ತಿತ್ತು. ಆದರೆ ಈ ಬಾರಿ ಜನರಿಗೆ ಹೊಂಡ, ಗುಂಡಿಗಳಿಂದ ಕೂಡಿದ ರಸ್ತೆಗಳೇ ಅನಿವಾರ್ಯವಾಗಿದೆ. ದಸರಾ ಹಿನ್ನೆಲೆಯಲ್ಲಿ ಭಕ್ತರು ನಾಲ್ಕು ಶಕ್ತಿ ದೇವತೆಗಳ ದೇವಾಲಯಗಳು ಸೇರಿದಂತೆ ವಿವಿಧ ದೇವಾಲಯಗಳಿಗೆ ತೆರಳುತ್ತಿದ್ದಾರೆ. ಆದರೆ ರಸ್ತೆಗಳು ನಡೆದಾಡಲು ಮತ್ತು ಆಟೋರೀಕ್ಷಾಗಳು ಸಂಚರಿಸಲಾಗದಷ್ಟು ಹದಗೆಟ್ಟಿದೆ. ರಸ್ತೆ ದುರಸ್ತಿಗೂ ಶಾಸಕರುಗಳು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯವೆಂದು ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಬೀದಿ ದೀಪಗಳು ಸಮರ್ಪಕವಾಗಿ ಬೆಳಗುತ್ತಿಲ್ಲ, ಹಲವು ಬೀದಿಗಳಲ್ಲಿ ಕಾರ್ಗತ್ತಲು ಆವರಿಸುತ್ತಿದ್ದು, ಪಾದಾಚಾರಿಗಳು ಆತಂಕದಿಂದಲೇ ಸಾಗಬೇಕಾದ ಅನಿವಾರ್ಯತೆ ಇದೆ. ಮನೆ ಮನೆ ಕಸ ಸಂಗ್ರಹ ಕೂಡ ಅಸಮರ್ಪಕವಾಗಿದ್ದು, ನಗರಸಭೆ ಸ್ವಚ್ಛತೆಗೆ ಆದ್ಯತೆ ನೀಡಿಲ್ಲವೆಂದು ಟೀಕಿಸಿದರು.
ಜಿಲ್ಲಾಡಳಿತ ದಸರಾ ಆಚರಣೆ ಕುರಿತು ತೆಗೆದುಕೊಂಡಿರುವ ತನ್ನ ನಿರ್ಧಾರವನ್ನು ತಕ್ಷಣ ಬದಲಾಯಿಸಬೇಕು ಮತ್ತು ನಗರದಲ್ಲಿ ಹಬ್ಬದ ವಾತಾವರಣವನ್ನು ಮೂಡಿಸಬೇಕೆಂದು ಗಣೇಶ್ ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಪಕ್ಷದ ಕಾರ್ಯದರ್ಶಿ ಸುಕೇಶ್ ಚೆಂಗಪ್ಪ, ಸಹ ಕಾರ್ಯದರ್ಶಿ ಬೊಳ್ಳಂಡ ಗಣೇಶ್, ಸಂಘಟನಾ ಕಾರ್ಯದರ್ಶಿ ಎಂ.ಎ.ಇಬ್ರಾಹಿಂ ಹಾಗೂ ಮಡಿಕೇರಿ ನಗರ ಯುವ ಜೆಡಿಎಸ್ ಅಧ್ಯಕ್ಷ ಮೋನಿಷ್ ಉಪಸ್ಥಿತರಿದ್ದರು.