ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ

October 22, 2020

ಮಡಿಕೇರಿ ಅ.22 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ವೃತ್ತಿಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹತ್ತು ತಿಂಗಳ ಅಪ್ರೆಂಟಿಸ್ ತರಬೇತಿಯನ್ನು ಹಮ್ಮಿಕೊಂಡಿದೆ.
2020-21 ನೇ ಸಾಲಿನಲ್ಲಿ ಇಲಾಖೆಯ ಜಿಲ್ಲಾ ಕಚೇರಿಗಳಲ್ಲಿ ಪರಿಶಿಷ್ಟ ಜಾತಿಯ ಇಬ್ಬರು ಹಾಗೂ ಪರಿಶಿಷ್ಟ ಪಂಗಡದ ಇಬ್ಬರು ಅಭ್ಯರ್ಥಿಗಳನ್ನು ಮೆರಿಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆಯಾದ ಪ್ರತಿ ಅಪ್ರೆಂಟಿಸ್‍ಗೆ ಮಾಹೆಯಾನ 15 ಸಾವಿರ ರೂ. ಗಳ ಸ್ಟೈಫಂಡ್ ನೀಡಲಾಗುವುದು. ಇಲಾಖೆಯ ಕ್ಷೇತ್ರ ಪ್ರಚಾರ ಕಾರ್ಯಗಳಲ್ಲಿ, ಸುದ್ದಿ ಸಂಗ್ರಹ, ರಚನೆ ಹಾಗೂ ವಿಶೇಷ ಲೇಖನ ರಚನೆಗಳಲ್ಲಿ ತರಬೇತಿ ನೀಡಲಾಗುವುದು.
ಅಭ್ಯರ್ಥಿಯು ಪತ್ರಿಕೋದ್ಯಮದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿದ್ದು, ಕನ್ನಡ ಭಾಷೆ ಬಳಕೆಯಲ್ಲಿ ಪ್ರಬುದ್ಧತೆ ಇರಬೇಕು. ಅಭ್ಯರ್ಥಿಗಳ ವಯಸ್ಸು ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ದಿನಾಂಕದಂದು 40 ವರ್ಷದೊಳಗಿರಬೇಕು.
ಅರ್ಜಿಯೊಂದಿಗೆ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಸ್ನಾತಕೋತ್ತರ ಪದವಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಪಾಸ್‍ಪೋರ್ಟ್ ಅಳತೆಯ 2 ಭಾವಚಿತ್ರ ಹಾಗೂ ಇನ್ನಿತರ ಪೂರಕ ದಾಖಲೆಗಳನ್ನು ದ್ವಿ-ಪ್ರತಿಯಲ್ಲಿ ಸಲ್ಲಿಸಲು ಅಕ್ಟೋಬರ್, 29 ಕಡೆ ದಿನವಾಗಿದೆ.
ಆಸಕ್ತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಾರ್ತಾ ಭವನ, ಸ್ಟುವರ್ಟ್ ಹಿಲ್ಸ್ ರಸ್ತೆ, ಮಡಿಕೇರಿ ಇಲ್ಲಿ ಪಡೆಯಬಹುದಾಗಿದೆ.

error: Content is protected !!