ಮಡಿಕೇರಿ ನಗರದಲ್ಲಿ ಭರದಿಂದ ಸಾಗಿದ ಸ್ವಚ್ಛತಾ ಕಾರ್ಯ

22/10/2020

ಮಡಿಕೇರಿ ಅ.22 : ಮಡಿಕೇರಿ ದಸರಾ ಹಿನ್ನೆಲೆ ನಗರದಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ. ನಗರದ ಪ್ರಮುಖ ರಸ್ತೆಗಳ ಬದಿ ಹಾಗೂ ಚರಂಡಿ ಶುಚಿಗೊಳಿಸುವ ಕಾರ್ಯ ನಡೆಯುತ್ತಿದ್ದು, ಗಿಡ ಗಂಟೆಗಳನ್ನು ಕಡಿದು ಸ್ವಚ್ಛ ಸುಂದರ ನಗರವನ್ನಾಗಿ ಮಾಡಲಾಗುತ್ತಿದೆ ಎಂದು ಪೌರಾಯುಕ್ತರಾದ ಎಸ್.ವಿ.ರಾಮದಾಸ್ ಅವರು ತಿಳಿಸಿದ್ದಾರೆ.
ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ನಗರದಲ್ಲಿ ಹಲವು ಕಡೆಗಳಲ್ಲಿ ರಸ್ತೆ ಗುಂಡಿ ಬಿದ್ದಿರುವುದನ್ನು ಮುಚ್ಚುವ ಕಾರ್ಯ ನಡೆಯುತ್ತಿದೆ. ನಗರದ ರಸ್ತೆಗಳ ಸುಧಾರಣೆ, ತಡೆಗೋಡೆ ನಿರ್ಮಾಣ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಈಗಾಗಲೇ ಶಾಸಕರ ಅನುದಾನದಲ್ಲಿ ಟಿ.ಜಾನ್ ಬಡಾವಣೆಯಲ್ಲಿ ರಸ್ತೆ ನಿರ್ಮಾಣ, ಮಳೆ ಹಾನಿಯಡಿ ಸಾಯಿ ರಸ್ತೆ, ಹೊಸ ಬಡಾವಣೆ ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಿದೆ ಎಂದು ರಾಮದಾಸ್ ಅವರು ಮಾಹಿತಿ ನೀಡಿದ್ದಾರೆ.
ದಸರಾ ಹಿನ್ನೆಲೆ ಸ್ವಚ್ಛತೆ ಸಂಬಂಧ ಕಾಡು ಮತ್ತು ಗಿಡಗಂಟೆಗಳನ್ನು ಕಡಿಯುತ್ತಿರುವ ಕಾರ್ಯ ನಡೆಯುತ್ತಿದ್ದು, ಹೆಚ್ಚುವರಿಯಾಗಿ 15 ಮಂದಿ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ನಗರದಲ್ಲಿ ವಿದ್ಯುತ್ ದೀಪ ಸರಿಪಡಿಸುವ ಕಾರ್ಯ ನಡೆದಿದ್ದು, ಯಾವ ಬಡಾವಣೆಯಲ್ಲಾದರೂ ಇನ್ನು ವಿದ್ಯುತ್ ದೀಪ ಅಳವಡಿಸಲು ಬಾಕಿ ಇದ್ದಲ್ಲಿ ನಗರಸಭೆಗೆ ಮಾಹಿತಿ ನೀಡಬೇಕಾಗಿ ಪೌರಾಯುಕ್ತರು ಕೋರಿದ್ದಾರೆ.
ಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಗಮನಹರಿಸಲಾಗಿದೆ. ನಗರದ ಪ್ರಮುಖ ಕಡೆಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.
ನಮೂನೆ-3 ಮತ್ತು ವ್ಯಾಪಾರ ಪರವಾನಗಿ ಸಂಬಂಧ ಬಾಕಿ ಇರುವ ಕಡತಗಳನ್ನು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೀಘ್ರ ವಿಲೇವಾರಿ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಳೆ ಹಿನ್ನೆಲೆ ನಗರದ ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ ಬಳಿಯ ‘ಮಡಿಕೇರಿ ಸ್ಕ್ವೇರ್’ ನಿರ್ಮಾಣ ಕಾಮಗಾರಿ ಮಳೆಯಿಂದ ಸ್ಥಗಿತಗೊಂಡಿದ್ದು, ‘ಅತೀ ಶೀಘ್ರದಲ್ಲಿ’ ಕಾಮಗಾರಿ ಆರಂಭಗೊಳ್ಳಲಿದೆ ಎಂದು ರಾಮದಾಸ್ ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಕೋವಿಡ್ ಸಂಬಂಧಿಸಿದಂತೆ ಅಲ್ಲಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಬ್ಯಾನರ್ ಮತ್ತು ಪೋಸ್ಟರ್ ಅಳವಡಿಸಲಾಗಿದೆ. ಸ್ಯಾನಿಟೈಸರ್ ಬಳಸುವುದು, ಅಂತರ ಕಾಯ್ದುಕೊಳ್ಳುವುದು, ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದರ ಜೊತೆ ಅಂಗಡಿ ಮುಂಗಟ್ಟುಗಳಲ್ಲಿಯೂ ಮಾಸ್ಕ್ ಧರಿಸಲು ಮಾಹಿತಿ ನೀಡಲಾಗಿದೆ. ನಗರದಲ್ಲಿ ಕಸವನ್ನು ಕಡ್ಡಾಯವಾಗಿ ಕಸದ ವಾಹನಕ್ಕೆ ನೀಡಲು ಸಾರ್ವಜನಿಕರಲ್ಲಿ ಕೋರಲಾಗಿದೆ ಎಂದು ರಾಮದಾಸ್ ಅವರು ಮಾಹಿತಿ ನೀಡಿದರು.
ಕೋವಿಡ್ ಹಿನ್ನೆಲೆ ಮಾಸ್ಕ್ ಧರಿಸದಿರುವವರಿಗೆ ದಂಡ ವಿಧಿಸಲಾಗುತ್ತಿದ್ದು, ಇದುವರೆಗೆ 21,800 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪೌರಾಯುಕ್ತರು ತಿಳಿಸಿದರು.
ನಗರ ವ್ಯಾಪ್ತಿಯ ದೊಡ್ಡ ಹೋಟೆಲ್‍ಗಳು, ಹೋಂ ಸ್ಟೇಗಳು ಎಲ್ಲೆಂದರಲ್ಲಿ ಕಸ ಬಿಸಾಡುವ ಬಗ್ಗೆ ಮಾಹಿತಿ ಇದ್ದು, ಈ ಬಗ್ಗೆ ಸಂಬಂಧಪಟ್ಟವರು ಎಲ್ಲೆಂದರಲ್ಲಿ ಕಸ ಬಿಸಾಡದೆ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ನಗರಸಭೆ ವಾಹನಕ್ಕೆ ನೀಡಬೇಕಾಗಿ ಪೌರಾಯುಕ್ತರು ಕೋರಿದ್ದಾರೆ.