ಅಲ್-ಬದರ್ ಉಗ್ರರ ಶರಣಾಗತಿ

23/10/2020

ಬಾರಾಮುಲಾ ಅ.23 : ಉತ್ತರ ಕಾಶ್ಮೀರದ ಸೇಬು ಪಟ್ಟಣವಾದ ಸೊಪೋರ್ ನಲ್ಲಿ ಭದ್ರತಾ ಪಡೆಗಳು ಗುರುವಾರ ನಡೆಸಿದ ತೀವ್ರ ಶೋಧ ಕಾರ್ಯಾಚರಣೆ ವೇಳೆ ಇಬ್ಬರು ಅಲ್-ಬದರ್ ಉಗ್ರರು ಶರಣಾಗಿದ್ದಾರೆ. ಉಗ್ರರು ಅಡಗಿರುವ ನಿರ್ದಿಷ್ಟ ಮಾಹಿತಿ ಆಧರಿಸಿ, ರಾಷ್ಟ್ರೀಯ ರೈಫಲ್ಸ್, ಜಮ್ಮು-ಕಾಶ್ಮೀರ ವಿಶೇಷ ಕಾರ್ಯಾಚರಣೆ ತಂಡ ಮತ್ತು ಸಿಆರ್ ಪಿಎಫ್ ಜಂಟಿಯಾಗಿ ಸೊಪೋರ್ ನ ತುಜ್ಜರ್ ಶರೀಫ್ ನಲ್ಲಿ ಗುರುವಾರ ಬೆಳಿಗ್ಗೆ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರೆದು ಮನೆ-ಮನೆಯಲ್ಲಿ ಶೋಧ ನಡೆಸಿದ್ದರು. ಈ ವೇಳೆ, ಅಲ್ ಬದರ್ ನ ಇಬ್ಬರು ಉಗ್ರರ ಕುಟುಂಬದವರು ಶರಣಾಗುವಂತೆ ಅವರ ಮನವೊಲಿಸಿದ್ದಾರೆ.
ಭದ್ರತಾ ಪಡೆಗಳ ಮಾತಿನಂತೆ ಅಡಗಿದ್ದ ಉಗ್ರರು ಇದೀಗ ಶರಣಾಗಿದ್ದಾರೆ. ಕಳೆದ ವಾರ ಬಡ್ಗಾಮ್ ನಲ್ಲಿ ಓರ್ವ ಉಗ್ರ ಶರಣಾಗಿದ್ದ. ಕಳೆದ ಕೆಲವು ತಿಂಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳ ಮುಂದೆ ಆರು ಉಗ್ರರು ಶರಣಾಗಿದ್ದಾರೆ.