ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭ

23/10/2020

ಬೆಂಗಳೂರು ಅ.23 : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ದೇಶಿಯ ನಿರ್ಮಿತ ಓಲೆಕ್ಟಾ ಎಲೆಕ್ಟ್ರಿಕ್ ಬಸ್ ಪರೀಕ್ಷಾರ್ಥ ಸಂಚಾರಕ್ಕೆ ಗುರುವಾರ ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಸಿರು ನಿಶಾನೆ ತೋರಿದರು.
ಬಳಕೆಗೂ ಮುನ್ನ ಲಭ್ಯತೆ ಆಯ್ಕೆ ಮತ್ತು ತಂತ್ರಜ್ಞಾನದ ಅರಿವಿಗೆ ಅನುವಾಗುವಂತೆ ಹವಾನಿಯಂತ್ರಿತ ಓಲೆಕ್ಟಾ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವರು, ಕೇಂದ್ರ ಸರ್ಕಾರವು ಭಾರೀ ಕೈಗಾರಿಕೆ ಇಲಾಖೆಯ ಮೂಲಕ ಒಪೆಕ್ಸ್ ಮಾದರಿಯಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ನಿಯೋಜಿಸಲು ರಾಜ್ಯ ಸರ್ಕಾರಕ್ಕೆ, ಸರ್ಕಾರಿ ಸಂಸ್ಥೆಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ಒದಗಿಸಲು ಫೇಮ್-2 ಬೇಡಿಕೆ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ ಭಾರೀ ಕೈಗಾರಿಕಾ ಇಲಾಖೆಯು ಒಂದು ಬಸ್ಸಿಗೆ 55 ಲಕ್ಷ ರೂ.ಗಳಷ್ಟು ಪ್ರೋತ್ಸಾಹ ಧನ ನೀಡಲಿದೆ. ಕೇಂದ್ರ ಸರ್ಕಾರದ ಭಾರೀ ಕೈಗಾರಿಕೆ ಇಲಾಖೆಯು ಬಿಎಂಟಿಸಿಗೆ 300 ಎಲೆಕ್ಟ್ರಿಕ್ ಬಸ್ ಗಳನ್ನು ಕಾರ್ಯಾಚರಣೆ ವೆಚ್ಚದ ಆಧಾರದ ಮೇಲೆ ಫೇಮ್ -2ಯೋಜನೆಯಡಿಯಲ್ಲಿ ಮಂಜೂರಾತಿ ನೀಡಿದೆ. ರಾಜ್ಯ ಸರ್ಕಾರವು 2020-21ನೇ ಸಾಲಿನ ಆಯವ್ಯಯದಲ್ಲಿ ಫೇಮ್ 2 ಅಡಿಯಲ್ಲಿ ಎಲೆಕ್ಟ್ರಿಕ್ ಬಸ್ ಗಳನ್ನು ಜಿಸಿಸಿ ಆಧಾರದ ಮೇಲೆ ಕಾರ್ಯಾಚರಣೆ ಮಾಡುತ್ತಿದ್ದು, ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರವು 500 ಎಲೆಕ್ಟ್ರಿಕ್ ಬಸ್ ಗಳ ಕಾರ್ಯಾಚರಣೆಗೆ 100 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ನೀಡಲು ಅನುಮೋದನೆ ನೀಡಿದೆ ಎಂದರು.