ಮಂಡ್ಯ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮೇಲುಕೋಟೆ

ಮೇಲುಕೋಟೆಯು ಕರ್ನಾಟಕದ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಒಂದು ಹಳ್ಳಿ ಹಾಗೂ ಪ್ರಸಿದ್ಧ ಯಾತ್ರಾ ಸ್ಥಳ. ಇಲ್ಲಿರುವ ಹೊಯ್ಸಳರು ಕಟ್ಟಿಸಿದ ಚೆಲುವರಾಯಸ್ವಾಮಿ ದೇವಸ್ಥಾನ ಪ್ರಸಿದ್ಧ ಧಾರ್ಮಿಕ ಕೆಂದ್ರ. ಮೇಲು ಕೋಟೆಯು ಜಿಲ್ಲಾ ಕೇಂದ್ರ ಸ್ಥಳ ಮಂಡ್ಯದಿಂದ ಸುಮಾರು 37 ಕಿ.ಮೀ ದೂರದಲ್ಲಿದೆ. ಇದು ಶ್ರೀವೈಷ್ಣವ ಪಂಥದ ಒಂದು ಕೇಂದ್ರ. ಇಲ್ಲಿ ಬೆಟ್ಟದ ಮೇಲೆ ಯೋಗ ನರಸಿಂಹಸ್ವಾಮಿಯ ದೇವಸ್ಥಾವಿದೆ. ಈ ಹಳ್ಳಿ ಸಂಸ್ಕೃತ ಪಾಠ ಶಾಲೆಗೂ ಹೆಸರುವಾಸಿ.
ಮೇಲುಕೋಟೆಯಲ್ಲಿ ಪ್ರತಿವರ್ಷವೂ ಹಲವಾರು ಕಾರ್ಯಕ್ರಮ, ಉತ್ಸವಗಳು ನಡೆಯುತ್ತವೆಯಾದರೂ ಅವುಗಳಲ್ಲಿ ಹತ್ತು ದಿನಗಳ ಕಾಲ ನಡೆಯುವ ಚೆಲುವರಾಯಸ್ವಾಮಿಯ ವೈರಮುಡಿ ಬ್ರಹ್ಮೋತ್ಸವ ಅತ್ಯಂತ ಪ್ರಮುಖವಾದುದಾಗಿದೆ. ಚೆಲುವರಾಯಸ್ವಾಮಿಯ ವೈರಮುಡಿಯ ಬ್ರಹ್ಮೋತ್ಸವವು ಪ್ರತಿ ವರ್ಷವೂ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ನಡೆಯುತ್ತದೆ. (ಪ್ರಸಕ್ತ ವರ್ಷ ಮಾರ್ಚ್ 12 ರಿಂದ 21ರವರೆಗೆ ನಡೆಯಲಿದ್ದು, ಮಾ.15ರಂದು ವೈರಮುಡಿ, ಮಾ.18ರಂದು ರಥೋತ್ಸವ ನಡೆಯಲಿದೆ.) ವೈರಮುಡಿ ಎಂಬುವುದು ವಜ್ರ ಖಚಿತ ಕಿರೀಟವಾಗಿದ್ದು, ಇದು ಶ್ರೀಮಾನ್ ನಾರಾಯಣನ ಕಿರೀಟವೆಂದೂ ದ್ವಾಪರಯುಗದಲ್ಲಿ ಕೃಷ್ಣನ ಮೂಲಕ ಚೆಲುವರಾಯನಿಗೆ ಗರುಡನಿಂದ ತೊಡಿಸಿದನೆಂಬುವುದು ಒಂದೆಡೆಯಾದರೆ, ಮತ್ತೊಂದೆಡೆ ವೈಕುಂಠದಿಂದ ರಾಕ್ಷಸ ವಿರೋಚನ ಕದ್ದಿದ್ದ ನಾರಾಯಣನ ಕಿರೀಟವನ್ನು ಗರುಡ ರಾಕ್ಷಸನೊಂದಿಗೆ ಹೋರಾಡಿ ಮರಳಿ ತಂದು ಚೆಲುವರಾಯನಿಗೆ ಅರ್ಪಿಸಿದನೆಂಬುದು ಜನವಲಯದಲ್ಲಿರುವ ನಂಬಿಕೆಯಾಗಿದೆ. ಇದನ್ನು ಚೆಲುವರಾಯಸ್ವಾಮಿಗೆ ಧರಿಸುವ ಸಂದರ್ಭ ನಡೆಯುವ ಉತ್ಸವವೇ ವೈರಮುಡಿ ಬ್ರಹ್ಮೋತ್ಸವವಾಗಿದೆ. ಇದು ಹೇಗೆ ಆಚರಣೆಗೆ ಬಂತೆಂಬುವುದರ ಬಗ್ಗೆ ಪುರಾಣದ ಕಥೆಯೊಂದು ಪ್ರಚಲಿತದಲ್ಲಿರುವದನ್ನು ನಾವು ಕಾಣಬಹುದು.
ಕ್ಷೇತ್ರ ಪುರಾಣ : ಅದು ತ್ರೇತಾಯುಗದ ದಿನಗಳು… ಅಯೋಧ್ಯೆಯಲ್ಲಿ ದಶರಥ ಮಹಾರಾಜ ತನ್ನ ಮಾನಸ ಪುತ್ರ ಶ್ರೀರಾಮಚಂದ್ರನಿಗೆ ಪಟ್ಟಾಭಿಷೇಕ ಮಾಡಲು ನಿರ್ಧರಿಸಿ, ಪಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನವನ್ನು ಗೊತ್ತು ಮಾಡಿ ಅರಮನೆಯಲ್ಲಿ ಪಟ್ಟಾಭಿಷೇಕಕ್ಕೆ ಬೇಕಾದ ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಮಾಡಿದ್ದನು. ಇನ್ನೇನು ಪಟ್ಟಾಭಿಷೇಕ ನಡೆಯಬೇಕೆನ್ನುವಷ್ಟರಲ್ಲಿ ಕೈಕೇಯಿಯ ಕುತಂತ್ರದಿಂದಾಗಿ ಶ್ರೀರಾಮ ವನವಾಸಕ್ಕೆ ತೆರಳಬೇಕಾಯಿತು. ಆದರೆ ತನ್ನ ಅಣ್ಣ ಶ್ರೀರಾಮನ ಪಟ್ಟಾಭಿಷೇಕವನ್ನು ಕಣ್ಣಾರೆ ನೋಡಬೇಕೆನ್ನುವ ಬಯಕೆಯಲ್ಲಿದ್ದ ತಮ್ಮ ಲಕ್ಷಣನಿಗೆ ತನ್ನ ಆಸೆ ಈಡೇರಲಿಲ್ಲವಲ್ಲ ಎಂಬ ಕೊರಗು ಸದಾ ಕಾಡುತ್ತಿತ್ತು.
ಆದರೆ ತನ್ನ ಬಯಕೆಯನ್ನು ಈಡೇರಿಸಿಕೊಳ್ಳುವ ಸಲುವಾಗಿ ಆದಿಶೇಷನ ಅವತಾರವಾಗಿದ್ದ ಲಕ್ಷ್ಮಣ ಮುಂದೆ ಕಲಿಯುಗದಲ್ಲಿ ರಾಮಾನುಜರಾಗಿ ಜನಿಸಿ, ಶ್ರೀರಾಮನ ಆರಾಧ್ಯದೈವ ಚೆಲುವರಾಯಸ್ವಾಮಿ ನೆಲೆಸಿದ ಮೇಲುಕೋಟೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕಕ್ಕೆ ನಿಗದಿಪಡಿಸಿದ ಫಾಲ್ಗುಣ ಮಾಸದ ಪುಷ್ಯ ನಕ್ಷತ್ರದ ಶುಭದಿನದಂದೇ ಚೆಲುವರಾಯಸ್ವಾಮಿಗೆ ವೈರಮುಡಿ ಕಿರೀಟ ಧರಿಸುವ ಮೂಲಕ ತನ್ನ ಮನದ ಇಚ್ಛೆಯನ್ನು ನೆರವೇರಿಸಿಕೊಂಡನಂತೆ ಈ ಸುದಿನವನ್ನು ಪ್ರತಿವರ್ಷವೂ ವೈರಮುಡಿ ಬ್ರಹ್ಮೋತ್ಸವವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಮೈಸೂರು ರಾಜರ ಆಡಳಿತದಲ್ಲಿ ವೈರಮುಡಿ ಕಿರೀಟ ರಾಜಾಶ್ರಯದಲ್ಲಿತ್ತಾದರೂ ಬಳಿಕ ಸರ್ಕಾರದ ವಶಕ್ಕೆ ಹಸ್ತಾಂತರಿಸಲಾಯಿತು. ಈಗ ಮಂಡ್ಯದ ಸರ್ಕಾರಿ ಖಜಾನೆಯಲ್ಲಿದ್ದು, ಉತ್ಸವದ ಸಂದರ್ಭ ವೈರಮುಡಿ, ರಾಜಮುಡಿ ಕಿರೀಟವನ್ನು ಬಿಗಿ ಭದ್ರತೆಯಲ್ಲಿ ಮೇಲುಕೋಟೆಗೆ ತರಲಾಗುತ್ತದೆಯಲ್ಲದೆ, ಬಳಿಕ ದ್ವಾರದ ಹನುಮಂತನ ಗುಡಿಯ ಬಳಿಯಿಂದ ಬೆಳ್ಳಿ ಪಲ್ಲಕಿಯಲ್ಲಿರಿಸಿ ಪೂಜಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ.


