ಅ.27 ರಿಂದ ಪೌತಿ ಖಾತೆ ಆಂದೋಲನ ಆರಂಭ : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ

23/10/2020

ಮಡಿಕೇರಿ ಅ.23 : ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ/ವಾರಸುದಾರರ ಮಾಲೀಕತ್ವವು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಖಾತೆ ಬದಲಾವಣೆ ಮಾಡುವ ನಿಟ್ಟಿನಲ್ಲಿ ಅಕ್ಟೋಬರ್, 27 ರಿಂದ ಕೊಡಗು ಜಿಲ್ಲೆಯಲ್ಲಿ ಪೌತಿ/ವಾರಸುದಾರರ ಖಾತೆ ಆಂದೋಲನ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೌತಿ/ವಾರಸಾ ಖಾತೆ ಆಂದೋಲನ ನಡೆಸುವ ಸಂಬಂಧ ಕಂದಾಯಾಧಿಕಾರಿಗಳ ಜೊತೆ ಶುಕ್ರವಾರ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೌತಿ/ವಾರಸುದಾರರು ಖಾತೆ ಆಂದೋಲನ ಸಂಬಂಧ ಸರ್ಕಾರ ಈಗಾಗಲೇ ಮಾರ್ಗಸೂಚಿ ಪ್ರಕಟಿಸಿದ್ದು, ಅದರಂತೆ ಕ್ರಮವಹಿಸುವಂತೆ ತಹಶೀಲ್ದಾರರು, ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಇತರರಿಗೆ ನಿರ್ದೇಶನ ನೀಡಿದರು.
ಪೌತಿ/ವಾರಸಾ ಖಾತೆ ಆಂದೋಲನ ಬಗ್ಗೆ ಸಂಬಂಧಪಟ್ಟವರು ನಾಡಕಚೇರಿಗೆ ನಮೂನೆ-1 ರಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಜಿಲ್ಲಾಡಳಿತದ ವೆಬ್‍ಸೈಟ್ www.kodagu.nic.in ನಲ್ಲಿ ಅಕ್ಟೋಬರ್ 27 ರಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
‘ಮರಣ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಒದಗಿಸಬೇಕು. ಮರಣ ಹೊಂದಿ ಒಂದು ವರ್ಷ ಮೇಲ್ಪಟ್ಟು ಆಗಿದ್ದಲ್ಲಿ ನ್ಯಾಯಾಲಯದಿಂದ ಮರಣ ಪ್ರಮಾಣ ಪತ್ರ ಪಡೆದು ಸಲ್ಲಿಸಬಹುದಾಗಿದೆ. ಹಾಗೆಯೇ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್‍ನ್ನು ಒದಗಿಸಬೇಕು. ವಂಶವೃಕ್ಷದ ಮಾಹಿತಿ ಇರಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.’
ಅರ್ಜಿ ಸಲ್ಲಿಕೆಯಾದ ನಂತರ 30 ದಿನಗಳಲ್ಲಿ ಪರಿಶೀಲಿಸಿ ಅರ್ಜಿ ಸಲ್ಲಿಸಿದವರ ಕುಟುಂಬದವರಿಗೆ ಪತ್ರ ರವಾನೆಯಾಗಲಿದ್ದು, ಈ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಮಾಹಿತಿ ಪಡೆದ ನಂತರ ಮಾಲೀಕರ ಹೆಸರಿಗೆ ಖಾತೆಯಾಗಲಿದೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಪೌತಿ/ವಾರಸಾ ಖಾತೆ ಆಂದೋಲನ ಸಂಬಂಧ ಕಂದಾಯಾಧಿಕಾರಿಗಳು ಮನೆ ಮನೆಗೆ ತೆರಳಿ ಮಾಹಿತಿ ನೀಡಬೇಕು ಖಾತೆ ಬದಲಾವಣೆ ಸಂಬಂಧಿಸಿದಂತೆ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸಹ ವಿಲೇವಾರಿ ಮಾಡುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ ಅವರು ಮಾಹಿತಿ ನೀಡಿ ಪೌತಿ/ವಾರಸುದಾರರ ಖಾತೆ ಆಂದೋಲನ ನಡೆಸಲು ಈಗಾಗಲೇ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಅದರಂತೆ ಆದ್ಯತೆ ಮೇಲೆ ಕ್ರಮವಹಿಸಬೇಕಿದೆ ಎಂದರು.
ಪ್ರತಿ ಗ್ರಾಮವಾರು ಮನೆ ಮನೆಗೆ ತೆರಳಿ ಮಾಹಿತಿ ನೀಡಬೇಕು. ಸ್ಥಳದಲ್ಲಿಯೇ ಪರಿಶೀಲಿಸಿ ಮಾಹಿತಿ ಪಡೆಯಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಸಭೆಯ ಆರಂಭದಲ್ಲಿ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅವರು ಮಳೆ ಹಾನಿ ಕಾಮಗಾರಿ ಸಂಬಂಧ ಆಡಳಿತಾತ್ಮಕ ಅನುಮೋದನೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ತಹಶೀಲ್ದಾರರಾದ ಮಹೇಶ್(ಮಡಿಕೇರಿ), ಗೋವಿಂದ ರಾಜು(ಸೋಮವಾರಪೇಟೆ), ನಂದೀಶ್(ವಿರಾಜಪೇಟೆ), ಭೂ ದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್, ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ವಿರೂಪಾಕ್ಷ, ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಇತರರು ಇದ್ದರು.
ಇನ್ನಷ್ಟು ಮಾಹಿತಿ:-ರೈತಾಪಿ ವರ್ಗದವರ ಸಮಸ್ಯೆಗಳನ್ನು ಪರಿಹರಿಸಿ ಪೌತಿ, ವಾರಸಾ ಸ್ವರೂಪದ ಮ್ಯುಟೇಶನ್ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಿ ಪೌತಿ, ವಾರಸಾ ಖಾತೆ ಆಂದೋಲನವನ್ನು ನಡೆಸಲು ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ/ ವಾರಸ ರೀತ್ಯಾ ಮಾಲೀಕತ್ವವು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ ಅಂತಹ ಜಮೀನುಗಳ ಸ್ವಾಧೀನವನ್ನು ಹೊಂದಿದ್ದರೂ ಸಹ ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿಪಡಿಸಲು ಸಾಲ ಸೌಕರ್ಯಗಳು ದೊರೆಯುವುದಿಲ್ಲ.
ಪ್ರಕೃತಿ ವಿಕೋಪದಂತಹ ಅಚಾತುರ್ಯಗಳಿಂದಾಗಿ ಫಸಲು ನಾಶವಾದಾಗ ಸರ್ಕಾರದಿಂದ ನೀಡಲಾಗುವ ವಿಮೆ, ಪರಿಹಾರದ ಮೊಬಲಗನ್ನು ಪಡೆಯುವುದು ದುಸ್ತರವಾಗುತ್ತದೆ. ಅಲ್ಲದೇ ಇಂತಹ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕೆ ಭೂಸ್ವಾಧೀನ ಕಾಯಿದೆಯಂತೆ ವಶಪಡಿಸಿಕೊಂಡಾಗಲೂ ಸಹ ಪರಿಹಾರದ ಹಣವನ್ನು ಪಡೆಯಲು ವಿವಿಧ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಇರುವುದನ್ನು ಗಮನಿಸಿ ಸರ್ಕಾರ ಮಾರ್ಗಸೂಚಿಸಿ ಹೊರಡಿಸಿದೆ.