ಕಾವೇರಿಗಾಗಿ ಕೊಡವರ ಪರ ಹೋರಾಟ : ಕಾವೇರಿಸೇನೆ ಎಚ್ಚರಿಕೆ

ಮಡಿಕೇರಿ ಅ.23 : ಕಾವೇರಿ ಕೊಡವರ ಕುಲದೇವತೆಯಾಗಿದ್ದು, ಮಾತೆ ಕಾವೇರಿ ಮತ್ತು ಕೊಡವರ ನಡುವಿನ ಅವಿನಾಭಾವ ಸಂಬಂಧವನ್ನು ಮುರಿಯಲು ತೆರೆಮರೆಯಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಕಾವೇರಿಸೇನೆಯ ಅಧ್ಯಕ್ಷ ರವಿಚಂಗಪ್ಪ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೆ ಕಾವೇರಿ ಮತ್ತು ಕೊಡವ ಸಮುದಾಯದ ನಡುವಿನ ಸಂಬಂಧಗಳನ್ನು ಮುರಿಯುವ ಯತ್ನದ ಬಗ್ಗೆ ಅಗತ್ಯ ಮಾಹಿತಿಯನ್ನು ಕ್ರೋಢೀಕರಿಸಿ ಕೊಡವ ಸಮುದಾಯಕ್ಕೆ ನ್ಯಾಯ ಒದಗಿಸಲು ಸರ್ವ ಪ್ರಯತ್ನ ಮಾಡಲಾಗುವುದೆಂದು ಹೇಳಿದರು.
ತಲಕಾವೇರಿಯಲ್ಲಿ ತುಲಾ ಸಂಕ್ರಮಣದ ತೀರ್ಥೋದ್ಭವದ ಪವಿತ್ರ ಕ್ಷಣಗಳಲ್ಲಿ ಅಲ್ಪಸಂಖ್ಯಾತ ಕೊಡವ ಸಮುದಾಯವನ್ನು ಗುರಿಯಾಗಿಸಿಕೊಂಡು, ಅವರನ್ನು ಜಾತ್ರೆಗೆ ತೆರಳದಂತೆ ನಿರ್ಬಂಧಿಸುವ ಪ್ರಯತ್ನಗಳು ನಡೆದಿದ್ದು, ಇದರಲ್ಲಿ ಶಾಸಕರೊಬ್ಬರ ಕುತಂತ್ರವೂ ಅಡಗಿದೆ ಎಂದು ರವಿಚಂಗಪ್ಪ ಆರೋಪಿಸಿದರು.
ತಲಕಾವೇರಿ ಮತ್ತು ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರು ಸಚಿವರು, ಶಾಸಕರÀ ಮೇಲೆ ಗೂಬೆ ಕೂರಿಸುವ ಬದಲು, ತಮ್ಮ ಸ್ಥಾನವನ್ನು ತ್ಯಜಿಸಿ ಹೋರಾಟ ಮಾಡಬೇಕಿತ್ತು. ಇದನ್ನು ಬಿಟ್ಟು ತೀರ್ಥೋದ್ಭವಕ್ಕೂ ಮೊದಲೇ ತಲಕಾವೇರಿಯಿಂದ ಹೊರ ತೆರಳಿರುವ ಕ್ರಮ ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ತೀರ್ಥೋದ್ಭವದ ಸಂದರ್ಭ ಕೊಡವ ಸಮೂಹ ಕಾವೇರಿಗೆ ತೆರಳಿ ಭಕ್ತಿಯನ್ನು ಸಮರ್ಪಿಸುವುದು ಸಂಪ್ರದಾಯವಾಗಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕೊಡವರ ಮತ್ತು ಕಾವೇರಿ ನಡುವಿನ ಸಂಬಂಧವನ್ನು ತೆಗೆದುಹಾಕುವ ಶತ ಪ್ರಯತ್ನಗಳು ನಡೆಯುತ್ತಿದೆ.
ಕೊಡÀವರ ಕುಲದೇವಿ ಕಾವೇರಿ ಎನ್ನುವುದು ಕೊಡಗಿನ ಗೆಜೆಟಿಯರ್‍ನಲ್ಲು ನಮೂದಾಗಿದೆ. ಇದೀಗ ಇಂತಹ ವಿಚಾರವನ್ನೇ ಬದಲು ಮಾಡುವ ಪ್ರಯತ್ನಗಳು ನಡೆಯುವುದರೊಂದಿಗೆ, ಕಾವೇರಿಯ ತೀರ್ಥೋದ್ಭವದಲ್ಲಿ ಕೊಡವ ಸಮೂಹ ಪಾಲ್ಗೊಳ್ಳದಂತೆ ತಡೆಯುವ ಪ್ರಯತ್ನಗಳು ಮುಂದುವರೆದಿದೆ. ಶೋಷಣೆಗೆ ಒಳಗಾದವರ ಪರ ಕಾವೇರಿಸೇನೆ ಹೋರಾಟ ನಡೆಸುತ್ತಾ ಬಂದಿದೆ. ಅದೇ ರೀತಿ ಇದೀಗ ಕೊಡವ ಸಮುದಾಯವನ್ನು ತುಳಿಯುವ ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ರಕ್ಷಣೆಗೆ ಸಂಘಟನೆ ಮುಂದಾಗಲಿದೆ. ಕಾನೂನು ಹೋರಾಟವನ್ನು ಕೂಡ ನಡೆಸಲಾಗುವುದೆಂದು ರವಿಚಂಗಪ್ಪ ತಿಳಿಸಿದರು. ಕುಲದೇವತೆ ಕಾವೇರಿಯನ್ನು ಕೊಡವ ಸಮುದಾಯಕ್ಕೆ ಬಿಟ್ಟು ಕೊಡುವಂತೆ ಆಗ್ರಹಿಸಿದರು.
ಕೋವಿಡ್ ಕಾರಣ ನೀಡಿ ತಲಕಾವೇರಿಯಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಆದರೆ, ಕೊರೋನಾ ಹರಡುವುದಕ್ಕೆ ಕಾರಣವಾಗಬಲ್ಲ ಪ್ರವಾಸಿಗರ ವಿರುದ್ಧ ಯಾರು ಮಾತನಾಡಿದ್ದಾರೆ ಎಂದು ಪ್ರಶ್ನಿಸಿದರು.
::: ಕಾನೂನು ಬಾಹಿರ :::
ವಕೀಲ ಬಿ.ಎ.ಮಾಚಯ್ಯ ಮಾತನಾಡಿ, ತಲಕಾವೇರಿಯ ತೀರ್ಥೋದ್ಭವದ ಸಂದರ್ಭ ಜಿಲ್ಲಾಧಿಕಾರಿಗಳು ತಮ್ಮ ಹಿಂದಿನ ಸುತ್ತೋಲೆಯನ್ನು ಹಿಂದಕ್ಕೆ ಪಡೆದು ಭಕ್ತರ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಿದ್ದರು. ಆದರೆ ತಲಕಾವೇರಿ ಭಾಗಮಂಡಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಅದನ್ನೇ ಪ್ರಶ್ನೆ ಮಾಡಿದ್ದಾರೆ. ಅವರೇನು ಜಿಲ್ಲಾಧಿಕಾರಿಳಿಗಿಂತ ದೊಡ್ಡವರೇ ಎಂದು ಪ್ರಶ್ನಿಸಿದರು. ಸಮಿತಿ ಅಧ್ಯಕ್ಷರು ಸಮಿತಿಯ ಇತರೆ ಸದಸ್ಯರನ್ನು ಓಲೈಸಿಕೊಳ್ಳಲು ಮತ್ತು ತಮ್ಮ ಸ್ಥಾನ ಉಳಿಸಿಕೊಳ್ಳುವ ಸಲುವಾಗಿ ಈ ರೀತಿ ವರ್ತಿಸಿದ್ದಾರೆ ಎಂದು ಟೀಕಿಸಿದರು.
ತಲಕಾವೇರಿ ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸ್ಥಾನವೆನ್ನುವುದೇ ಕಾನೂನು ಬಾಹಿರÀ. ಮುಜರಾಯಿ ಕಾನೂನಿನಲ್ಲಿ ಇಂತಹ ಅಧ್ಯಕ್ಷ ಸ್ಥಾನ ಎನ್ನುವುದೇ ಇಲ್ಲ. ಸಮಿತಿಯ ಅಧ್ಯಕ್ಷರು ಜಿಲ್ಲಾಧಿಕಾರಿಗಳೇ ಆಗಿರುತ್ತಾರೆ ಎಂದು ಸ್ಪಷ್ಟಪಡಿಸಿದ ಮಾಚಯ್ಯ, ಸಮಿತಿಯ ಅಧ್ಯಕ್ಷರ ಹುದ್ದೆ ಕಾನೂನಾತ್ಮಕವಾಗಿಲ್ಲ. ಇದನ್ನು ತೆಗೆದು ಹಾಕಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಮತ್ತು ಸ್ಪಂದನ ದೊರೆಯದಿದ್ದಲ್ಲಿ ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಬಿ.ಎಂ.ಗಣಪತಿ ಉಪಸ್ಥಿತರಿದ್ದರು.
