ಮಡಿಕೇರಿ ಜು.4 : ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನ ಅಮ್ಮತ್ತಿಯ ಶ್ರೀ ಮುತ್ತಪ್ಪ ದೇವಾಲಯ ವ್ಯಾಪ್ತಿಯ ಬಸ್ ನಿಲ್ದಾಣದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಮ್ಮತ್ತಿ ನಿವಾಸಿ ಎನ್.ಎ.ಪೊನ್ನಣ್ಣ (46) ಹಾಗೂ ವಿರಾಜಪೇಟೆ ಸುಂಕದಕಟ್ಟೆ ನಿವಾಸಿ ಹೆಚ್.ಆರ್.ಲೋಹಿತ್ (26) ಅವರನ್ನು 104 ಗ್ರಾಂ ಗಾಂಜಾ ಸಹಿತ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
ವಿರಾಜಪೇಟೆ ಉಪ ವಿಭಾಗದ ಡಿವೈಎಸ್‌ಪಿ ಆರ್.ಮೊಹನ್ ಕುಮಾರ್, ಸಿಪಿಐ ಬಿ.ಎಸ್.ಶಿವರುದ್ರಪ್ಪ, ಪಿಎಸ್‌ಐ ಮಂಜುನಾಥ.ಸಿ.ಸಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು.
ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಮಾದಕ ವಸ್ತು ಮಾರಾಟದ ಕುರಿತು ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.








