
ಮಡಿಕೇರಿ NEWS DESK ಫೆ.12 : ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಸರಕಾರದ ಭ್ರಷ್ಟಾಚಾರಕ್ಕಿಂತಲೂ ಈಗಿನ ಸರಕಾರದ ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದೆ ಮತ್ತು “ಮಧ್ಯವರ್ತಿ”ಗಳ ಮೂಲಕ ಸರಕಾರದ ಆಡಳಿತ ನಡೆಯುತ್ತಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಆರ್.ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ. ನಗರದ ಸುದರ್ಶನ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಗುತ್ತಿಗೆದಾರರ ಸಂಘದ ಹಿಂದಿನ ಅಧ್ಯಕ್ಷರಾಗಿ ಕೆಂಪಣ್ಣ ಅವರು ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ವಿರೋಧ ಪಕ್ಷದಲ್ಲಿದ್ದ ಸಿದ್ದರಾಮಯ್ಯ ಅವರು, ಅಂದಿನ ಸಂದರ್ಭಗಳನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದರು. ಹೀಗಿದ್ದೂ ಇಂದು ಗುತ್ತಿಗೆದಾರರ ಸಂಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ಬಹಳಷ್ಟು ಇಲಾಖೆಗಳಲ್ಲಿ ಕೆಲವು ಸಚಿವರು ಮಧ್ಯವರ್ತಿಗಳ ಮೂಲಕ ಆಡಳಿತ ನಡೆಸುತ್ತಿದ್ದಾರೆ, ಇಂತಹ ಕೆಲಸ ಇತಿಹಾಸದಲ್ಲೆ ನಡೆದಿಲ್ಲ ಎಂದು ಟೀಕಿಸಿದರು. ರಾಜ್ಯವ್ಯಾಪಿ ಗುತ್ತಿಗೆದಾರರ ಕೆಲಸಗಳಿಗೆ 37 ಸಾವಿರ ಕೋಟಿ ರೂ. ಇಂದಿಗೂ ಪಾವತಿಯಾಗಿಲ್ಲ. ಕಳೆೆದ ಎರಡೂವರೆ ವರ್ಷಗಳ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಕಿಂಚಿತ್ ಹಣ ಪಾವತಿಯಾಗದೆ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಕಿ ಮೊತ್ತವನ್ನು ತಕ್ಷಣ ಪಾವತಿಸುವಂತೆ ಆಗ್ರಹಿಸಿ ಮಾ.5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಗುತ್ತಿಗೆದಾರರು ಬೃಹತ್ ಮುಷ್ಕರ ನಡೆಸಲಿದ್ದಾರೆ ಎಂದರು. ರಾಜ್ಯವ್ಯಾಪಿ ಗುತ್ತಿಗೆದಾರರಿಗೆ ನೀಡಲು ಬಾಕಿ ಇರುವ ಹಣ ಮತ್ತು ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗಳು, ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಪರಿಹಾರ ಸೂಚಿಸಬೇಕೆಂದು ಒತ್ತಾಯಿಸಿದರು.
ಗುತ್ತಿಗೆದಾರರಿಗೆ ನೀಡಲು ಬಾಕಿ ಇರುವ 37 ಸಾವಿರ ಕೋಟಿ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡಬೇಕು. ಗುತ್ತಿಗೆದಾರರು ಸಾಲ ಸೋಲ ಮಾಡಿ ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ. ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ 190 ಕೋಟಿ ರೂ. ಪಾವತಿಸದೆ ಬಾಕಿ ಉಳಿಸಿಕೊಂಡಿದೆ. ಇದರಲ್ಲಿ ಲೋಕೋಪಯೋಗಿ ಇಲಾಖೆಯದ್ದೆ 96 ಕೋಟಿಯಷ್ಟಿದೆ ಎಂದು ಆರ್.ಮಂಜುನಾಥ್ ತಿಳಿಸಿದರು. ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ 2018-19, 2019-20ನೇ ಅವಧಿಯಲ್ಲಿ ಇಲ್ಲಿನ ಗುತ್ತಿಗೆದಾರರು ಸಾಕಷ್ಟು ಸಂಕಷ್ಟಗಳ ನಡುವೆಯೂ ಹತ್ತು ಹಲವು ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ. ಇದರ ಬಾಪ್ತು 7 ಕೋಟಿ ರೂ. ಪಾವತಿಯಾಗಲು ಬಾಕಿ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಎನ್.ಡಿ.ಕೃಷ್ಣ, ಉಪಾಧ್ಯಕ್ಷ ಎ.ಜಿ.ಸುರೇಶ್, ಸಂಘಟನಾ ಕಾರ್ಯದರ್ಶಿ ನಾಗರಾಜ್, ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕಿಮ್ಮುಡಿರ ರವಿ ಚಂಗಪ್ಪ, ಜಿಲ್ಲಾ ಕಾರ್ಯದರ್ಶಿ ಲಾರೆನ್ಸ್, ಗೌರವಾಧ್ಯಕ್ಷ ಸಣ್ಣೇಗೌಡ, ಉಪಾಧ್ಯಕ್ಷ ಎಂ.ಕೆ.ಚಂಗಪ್ಪ, ನಗರ ಉಪಾಧ್ಯಕ್ಷ ರಾಜೀವಲೋಚನ, ಸಂಘಟನಾ ಕಾರ್ಯದರ್ಶಿ ಕೆ.ಬಾಬು ಹಾಗೂ ಖಜಾಂಚಿ ರವೀಂದ್ರ ರೈ ಉಪಸ್ಥಿತರಿದ್ದರು.








