ಮಡಿಕೇರಿ ಸೆ.6 : ಸರಕಾರಿ ಶಾಲೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಲ್ಲದೇ, ವಿದ್ಯಾರ್ಥಿಗಳ ಪುಸ್ತಕಗಳನ್ನು ಹರಿದು ಹಾಕಿ ಸ್ಥಳದಲ್ಲೇ ಮದ್ಯ ಸೇವಿಸಿ ವಿಕೃತಿ ಮೆರೆದು ಪರಾರಿಯಾಗಿರುವ ಘಟನೆ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘಟ್ಟದಳ್ಳ ಸರ್ಕಾರಿ ತಮಿಳು ಶಾಲೆಯಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಬುಧವಾರ ಶಾಲೆಗೆ ಆಗಮಿಸಿದ ಶಿಕ್ಷಕರಿಗೆ ಕೊಠಡಿಯೊಂದರ ಬೀಗವನ್ನು ಕಬ್ಬಿಣದ ರಾಡಿನಿಂದ ಮುರಿಯಲಾಗಿರುವ ದೃಶ್ಯ ಕಂಡು ಬಂದಿದೆ. ಕೊಠಡಿಯನ್ನು ಪರಿಶೀಲಿಸಿದ ಶಾಲಾ ಮುಖ್ಯ ಶಿಕ್ಷಕ ಅಶ್ರಫ್ ಘಟನೆ ಕುರಿತು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಕೊಠಡಿ ಮತ್ತು ಶಾಲೆಯ ಸುತ್ತಮುತ್ತಲು ಪರಿಶೀಲನೆ ನಡೆಸಿದರು.
ಕೊಠಡಿಯೊಂದರಲ್ಲಿ ಸಂಗ್ರಹಿಸಿ ಇಡಲಾಗಿದ್ದ ವಿದ್ಯಾರ್ಥಿಗಳ ಪುಸ್ತಕಗಳನ್ನು ಹರಿದು, ಚೆಲ್ಲಾಪಿಲ್ಲಿ ಮಾಡಿರುವ ಕಳ್ಳರು ಸ್ಥಳದಲ್ಲಿಯೇ ಮದ್ಯ ಸೇವಿಸಿರುವುದು ಕಂಡು ಬಂದಿದೆ. ಮದ್ಯ ಮತ್ತು ನೀರಿನ ಬಾಟಲಿ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.







