ಮಡಿಕೇರಿ ಜು.14 : ಸಹೋದರರ ನಡುವಿನ ಆಸ್ತಿ ಕಲಹ ಅಣ್ಣನ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಮಡಿಕೇರಿ ತಾಲೂಕಿನ ಸಂಪಾಜೆಯ ಚೆಂಬು ಗ್ರಾಮದಲ್ಲಿ ನಡೆದಿದೆ. ಪುತ್ತೂರಿನ ಸಂಪ್ಯಾ ನಿವಾಸಿ ಉಸ್ಮಾನ್(65) ಎಂಬುವವರೇ ಕೊಲೆಯಾದ ದುರ್ದೈವಿಯಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಸಹೋದರರಿಂದ ಅಣ್ಣನ ಕೊಲೆಯಾಗಿದೆ ಎಂದು ಆರೋಪಿಸಲಾಗಿದೆ.
ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಮೃತ ಉಸ್ಮಾನ್ ಹಾಗೂ ಸಹೋದರರು ಸಂಪಾಜೆಯ ಕುದ್ರೆಪಾಯದಲ್ಲಿ ಕೃಷಿ ಭೂಮಿ ಹೊಂದಿದ್ದರು. ಉಸ್ಮಾನ್ ಅವರು ಕುಟುಂಬ ಸಹಿತ ಪುತ್ತೂರಿನಲ್ಲಿ ನೆಲೆಸಿದ್ದು, ಪ್ರತಿ ಶುಕ್ರವಾರ ಸಂಪಾಜೆ ಕುದ್ರೆಪಾಯ ತೋಟಕ್ಕೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಸಹೋದರರ ನಡುವೆ ಜಾಗದ ವಿಚಾರವಾಗಿ ಹಿಂದಿನಿಂದಲೂ ವೈಷಮ್ಯವಿತ್ತು ಎಂಬ ಮಾತುಗಳು ಕೇಳಿ ಬಂದಿದೆ. ಶುಕ್ರವಾರ ಕುದ್ರೆಪಾಯದ ಜಾಗದಲ್ಲಿ ಸರ್ವೆ ಕಾರ್ಯ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದಕ್ಕಾಗಿ ಉಸ್ಮಾನ್ ಹಾಗೂ ಇಬ್ಬರು ಸಹೋದರರು ಕೂಡ ಕುದ್ರೆಪಾಯಕ್ಕೆ ಬಂದಿದ್ದರು.
ಈ ಸಂದರ್ಭ ಮಾತಿಗೆ ಮಾತು ಬೆಳೆದು ಉಸ್ಮಾನ್ ಅವರನ್ನು ಚೂರಿಯಿಂದ ಇರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟರು ಎಂದು ಆರೋಪಿಸಲಾಗಿದೆ. ಸ್ಥಳಕ್ಕಾಗಮಿಸಿದ ಸಂಪಾಜೆ ಮತ್ತು ಮಡಿಕೇರಿ ಗ್ರಾಮಾಂತರ ಪೊಲೀಸರು ಮೃತದೇಹದ ಮಹಜರು ನಡೆಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.








