ಮಡಿಕೇರಿ ಆ.4 : ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಬಂದು ಕುಶಾಲನಗರದ ಹಾರಂಗಿಯಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದ ವ್ಯಕ್ತಿಯ ಮೃತದೇಹವನ್ನು ಇಂದು ಹೊರ ತೆಗೆಯಲಾಗಿದೆ.
ಬೆಂಗಳೂರು ವಿಜಯಪುರದ ನಿವಾಸಿ ಸಂದೀಪ್ (45) ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ. ಗುರುವಾರ ಹಾರಂಗಿ ಜಲಾಶಯದ ಎದುರಿನ ಸೇತುವೆಯಿಂದ ಆಯತಪ್ಪಿ ನೀರಿಗೆ ಬಿದ್ದಿದ್ದರು. ಸಂಜೆ ಶವ ಪತ್ತೆ ಕಾರ್ಯಾಚರಣೆ ವಿಫಲವಾದ ಹಿನ್ನೆಲೆ ಇಂದು ಅಗ್ನಿಶಾಮಕ ದಳ ಹಾಗೂ ದುಬಾರೆಯ ರ್ಯಾಫ್ಟಿಂಗ್ ತಂಡ ಶೋಧ ಕಾರ್ಯ ನಡೆಸಿತು. ಹಾರಂಗಿ ಜಲಾಶಯದ ಹೊರಹರಿವು ಸ್ಥಗಿತಗೊಳಿಸಿ ಪತ್ತೆ ಕಾರ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮಧ್ಯಾಹ್ನದ ವೇಳೆಗೆ ಸೇತುವೆಯ ಕೆಳಭಾಗದಲ್ಲೇ ಶವ ಸಿಕ್ಕಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.









