ಮಡಿಕೇರಿ ಜೂ.13 : ಸುಮಾರು 18 ತಿಂಗಳ ಹೆಣ್ಣು ಹುಲಿ ಮರಿಯೊಂದು ಸಾವನ್ನಪ್ಪಿರುವ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.
ಹುಲಿಗಳ ನಡುವಿನ ಕಾದಾಟದಲ್ಲಿ ಹೆಣ್ಣು ಹುಲಿ ಮರಿ ಮೃತಪಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಡಿ.ಬಿ.ಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ಕಬಿಸಿ-ತರಿಕಿಹಳ್ಳ ಅರಣ್ಯ ಪ್ರದೇಶದಲ್ಲಿ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದಾಗ ಹುಲಿ ಸತ್ತು ಬಿದ್ದಿರುವುದು ಕಂಡು ಬಂದಿದೆ. ಮೃತದೇಹದಲ್ಲಿ ಗಾಯಗಳ ಗುರುತು ಕಾಣಿಸಿಕೊಂಡಿದೆ. ಪಶು ವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯ ಸಂಸ್ಕಾರ ನಡೆಸಲಾಯಿತು.








