ಮಡಿಕೇರಿ ಜ.9 : ಕೊಡಗು ರಕ್ಷಣಾ ವೇದಿಕೆ ಆರಂಭಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪರವಾದ ಹೋರಾಟಕ್ಕೆ ಜಾತ್ಯತೀತ ಜನತಾದಳದ ಮುಖಂಡ, ಎಂ ಅಂಡ್ ಎಂ ಸಮೂಹ ಸಂಸ್ಥೆಗಳ ಮುಖ್ಯಸ್ಥ ಹಾಗೂ ಸಮಾಜ ಸೇವಕ ನಾಪಂಡ ಎಂ.ಮುದ್ದಪ್ಪ ಬೆಂಬಲ ಸೂಚಿಸಿದ್ದಾರೆ.
ಕೊಡಗಿಗೆ ಅಗತ್ಯವಾಗಿ ಬೇಕಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯ ಕುರಿತು ಪ್ರಮುಖರ ಗಮನ ಸೆಳೆಯಲೆಂದು ಕೊರವೇ ನಿಯೋಗ ಬೆಂಗಳೂರಿಗೆ ತೆರಳಿತ್ತು. ಈ ಸಂದರ್ಭ ಮುದ್ದಪ್ಪ ಅವರನ್ನು ಭೇಟಿಯಾದ ಕೊರವೇ ಪ್ರಮುಖರು ಆಸ್ಪತ್ರೆ ಅಭಿಯಾನಕ್ಕೆ ಬೆಂಬಲ ಕೋರಿದರು.
ಇದಕ್ಕೆ ಸ್ಪಂದಿಸಿದ ಅವರು ಕೊರವೇ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.
ಕೊರವೇ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ಮಾತನಾಡಿ ಪ್ರತಿಯೊಂದು ಚಿಕಿತ್ಸೆಗೂ ಜಿಲ್ಲೆಯ ಜನ ಬೆಂಗಳೂರು, ಮೈಸೂರು, ಮಂಗಳೂರು ಆಸ್ಪತ್ರೆಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಇಷ್ಟರವರೆಗೆ ವೀರರನಾಡು ಕೊಡಗು ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡದೆ ಇರುವುದು ದುರಂತವೆಂದು ಬೇಸರ ವ್ಯಕ್ತಪಡಿಸಿದರು.
ಎಲ್ಲಾ ವ್ಯವಸ್ಥೆಗಳಿರುವ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಯೋಜನೆ ಸಾಕಾರಗೊಳ್ಳುವಲ್ಲಿಯವರೆಗೆ ಕೊರವೇ ಹೋರಾಟ ಮುಂದುವರಿಯಲಿದೆ. ಪಕ್ಷಾತೀತ ಮತ್ತು ಜಾತ್ಯತೀತವಾಗಿ ನಡೆಸುತ್ತಿರುವ ಹೋರಾಟಕ್ಕೆ ಪ್ರತಿಯೊಬ್ಬರು ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.
ಕೊರವೇ ಜಿಲ್ಲಾ ನಿರ್ದೇಶಕರುಗಳಾದ ಎಂ.ವೈ.ಸುಲೇಮಾನ್, ರವಿಪಾಪು ಮತ್ತಿತರರು ನಿಯೋಗದಲ್ಲಿದ್ದರು.













