ಕುಶಾಲನಗರ ಏ.26 NEWS DESK : ತಾವು ಕಲಿತ ವಿದ್ಯಾಸಂಸ್ಥೆಗೆ ಯಾವತ್ತೂ ಕೃತಜ್ಞರಾಗುವ ಮೂಲಕ ಸಂಸ್ಥೆಯ ಪ್ರಗತಿಗೆ ಕಂಕಣ ಬದ್ದರಾಗಬೇಕೆಂದು ಕುಶಾಲನಗರದ ಹಿರಿಯ ನಾಗರಿಕರಾದ ವಿ.ಎನ್.ವಸಂತಕುಮಾರ್ ಹಳೆಯ ವಿದ್ಯಾರ್ಥಿಗಳಿಗೆ ಕರೆಕೊಟ್ಟರು. ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ನೆನಪು ಎಂಬ ಹಳೆಯ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಲೇಜಿನಲ್ಲಿ ಕಲಿತ, ಆಡಿ ನಲಿದ ನೆನಪುಗಳು ಯಾವತ್ತಿಗೂ ಚಿರಸ್ಮರಣೀಯ. ಕಾಲೇಜಿನಲ್ಲಿ ಕಲಿತು ಇಂದು ಉತ್ತಮ ಭವಿಷ್ಯ ಕಟ್ಟಿಕೊಂಡಿರುವ ಹಳೆಯ ವಿದ್ಯಾರ್ಥಿಗಳು ತಮ್ಮ ಸಂಪಾದನೆಯ ಒಂದು ಭಾಗವನ್ನು ಸಮಾಜ ಸೇವೆಗೆ ತಾವು ಕಲಿತ ವಿದ್ಯಾದೇಗುಲಕ್ಕೆ ಮರಳಿಸಿದರೆ ಅದರಷ್ಟು ಪುಣ್ಯದ ಕಾರ್ಯ ಬೇರಾವುದೂ ಇಲ್ಲ ಎಂದು ಅವರು ಹೇಳಿದರು. ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಆಡಳಿತಾಧಿಕಾರಿ ಹೆಚ್.ವಿ.ಶಿವಪ್ಪ ಮಾತನಾಡಿ, ಕಾಲೇಜು ಆರಂಭವಾದ ಹೊಸತರಲ್ಲಿ ಸಂಸ್ಥೆಯ ಅಭಿವೃದ್ದಿಗೆ ತಾವು ದುಡಿದ ಸೇವೆಯನ್ನು ಸ್ಮರಿಸಿದರು. ಕಾಲೇಜಿನ ಹಿರಿಯ ಉಪನ್ಯಾಸಕ ಡಾ.ಸತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, 2007 – 08 ರ ಸಾಲಿನಲ್ಲಿ ಆರಂಭವಾದ ಕಾಲೇಜು ಇಂದು 18 ನೇ ವರ್ಷದ ಪಾದಾರ್ಪಣೆಗೊಂಡಿದ್ದು, ಇಂದು ಹಳೆಯ ವಿದ್ಯಾರ್ಥಿಗಳು ಸೇರಿ ” ನೆನಪು ” ಎಂಬ ಸಂಘವನ್ನು ಆರಂಭಿಸಿರುವುದು ಸಂತಸದ ಸಂಗತಿ ಎಂದರು. ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಹಳೆಯ ವಿದ್ಯಾರ್ಥಿಗಳನ್ನು ನಿರಂತರವಾಗಿ ಸಂಪರ್ಕಿಸಿ ಈಗ ಸಂಘವನ್ನು ರಚಿಸಿ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಇದೀಗ 3000 ವಿದ್ಯಾರ್ಥಿಗಳು ಹೊರಹೋಗಿದ್ದು ತಮ್ಮ ಭವಿಷ್ಯವನ್ನು ಕಟ್ಟಿಕೊಂಡಿದ್ದಾರೆ ಎಂದು ಹೇಳಿದರು. ನೆನಪು ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಗೋವಿಂದರಾಜು ಮಾತನಾಡಿ, ಕಾಲೇಜಿನಲ್ಲಿ ಕಲಿತ ನಾವುಗಳು ಒಂದು ಶಿಸ್ತು ಬದ್ಧವಾದ ತಂಡವನ್ನು ಮಾಡಿಕೊಂಡು ಕಾಲೇಜಿನ ಅಭಿವೃದ್ದಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ತಾಂತ್ರಿಕ ಪ್ರಗತಿಗೆ ಅವಶ್ಯವಿರುವ ಸೌಲಭ್ಯಗಳನ್ನು ಹಂತ ಹಂತವಾಗಿ ಒದಗಿಸುವ ಚಿಂತನೆ ಹೊಂದಿದ್ದೇವೆ ಎಂದರು. ಕಾಲೇಜು ಪ್ರಾಂಶುಪಾಲ ಡಾ.ಪರಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಹಿಂದಿನ ಪ್ರಾಂಶುಪಾಲ ಡಾ.ವೆಂಕಟೇಶ್, ಹಿರಿಯ ಪ್ರಾಧ್ಯಾಪಕರಾದ ಡಾ.ಸೀನಪ್ಪಾ, ಡಾ.ರಂಗನಾಥ್, ವಿದ್ಯಾರ್ಥಿ ಸಂಘದ ಸಂಯೋಜಕರಾದ ಡಾ.ಮಾರುತಿ, ಡಾ.ಶ್ರೀನಿವಾಸ್, ಚಾಮರಾಜನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರೊ.ಶ್ರೀನಿವಾಸ್, ನೆನಪು ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪೃಥ್ವಿರಾಜ್, ಖಜಾಂಚಿ ಸಿನಾನ್, ಸುಖೇಶ್, ವಿನಯಪ್ರಸಾದ್, ದರ್ಶನ್, ಸಂದೇಶ್, ಪ್ರಿಯದಿನೇಶ್, ವಿದ್ಯಾರ್ಥಿನಿ ಯೋಗಿತಾ ಪ್ರಾರ್ಥಿಸಿದರು. ಕಾಲೇಜಿನ ಸಿಬ್ಬಂದಿ ರೂಪ ನಿರೂಪಿಸಿದರು. ಉಪನ್ಯಾಸಕಿ ಪವಿತ್ರ ಸ್ವಾಗತಿಸಿದರು.











