ವಿರಾಜಪೇಟೆ ಜ.18 : ಬಾಳಿ ಬದುಕಬೇಕಾಗಿದ್ದ ಸಹೋದರರ ಬಾಳಿನಲ್ಲಿ ಆಕಸ್ಮಿಕವಾಗಿ ಕತ್ತಲು ಆವರಿಸಿ ದೃಷ್ಟಿ ಹೀನರಾದರು, ಗುಡಿಸಲು ಮನೆಯು ಆಸರೆಯಾದ ಹಿನ್ನಲೆಯಲ್ಲಿ ಗ್ರಾ.ಪಂ ಸುಮಾರು ಎರಡು ತಿಂಗಳ ಅವಧಿಯಲ್ಲಿ ಮನೆ ನಿರ್ಮಾಣ ಮಾಡಿ ಅಂಧ ಸಹೋದರರಿಗೆ ಮಕರ ಸಂಕ್ರಾಂತಿಯ ಉಡುಗೊರೆಯಾಗಿ ನೀಡಿತು.
ವಿರಾಜಪೇಟೆ ಕೆದಮುಳ್ಳೂರು ಗ್ರಾ.ಪಂ ವ್ಯಾಪ್ತಿಯ ಬಾರಿಕಾಡು ಪೈಸಾರಿ ನಿವಾಸಿ ಪಿ.ಕೆ.ರಾಮಚಂದ್ರ ಮತ್ತು ಸರೋಜ ದಂಪತಿಗಳ ಪುತ್ರರಾದ ಪಿ.ಆರ್. ಕೃಷ್ಣೇಂದ್ರ ಮತ್ತು ಪಿ.ಆರ್. ಜಯೇಂದ್ರ ದೃಷ್ಟಿ ಕಳೆದುಕೊಂಡು ಜೀವನ ಸಾಗಿಸುತ್ತಿರುವ ಸಹೋದರರು. ಬಡ ಜೀವಗಳ ಬಾಳಿಗೆ ಕೆದಮುಳ್ಳೂರು ಗ್ರಾ.ಪಂ ಯು ಬಸವ ಕಲ್ಯಾಣ ಯೋಜನೆ ಅಡಿಯಲ್ಲಿ ಮನೆಯೊಂದು ನಿರ್ಮಾಣ ಮಾಡಿ ಸಂಕ್ರಾಂತಿ ದಿನದ ಕಾಣಿಕೆಯಾಗಿ ನೀಡಿತು.
ಕೆದಮುಳ್ಳೂರು ಗ್ರಾ.ಪಂ ಚುನಾಯಿತ ಪ್ರತಿನಿಧಿಗಳು, ಪಿ.ಡಿ.ಓ, ಕಾರ್ಯದರ್ಶಿ, ಸಿಬ್ಬಂದಿಗಳು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಸರಳವಾಗಿ ನಡೆದ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿ ಮಾತನಾಡಿದ ತಾಲ್ಲೂಕು ದಂಢಾಧಿಕಾರಿ ಹಾಗೂ ತಹಶೀಲ್ದಾರ್ ಅರ್ಚನಾ ಭಟ್, ಸಮಾಜ ಸಬಲೀಕರಣ ಎಂಬುದು ಬಡವರ, ದೀನ ದಲಿತರನ್ನು ಗುರುತಿಸಿ ಸರ್ಕಾರದ ಯೋಜನೆಗಳನ್ನು ತಲುಪಿಸುವುದಾಗಿದೆ. ಚುನಾಯಿತ ಪ್ರತಿನಿಧಿಗಳು ಗ್ರಾಮ ಏಳಿಗೆಯತ್ತ ಗಮನ ಹರಿಸಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಬೇಕು ಅಲ್ಲದೆ ತಮ್ಮ ಕರ್ತವ್ಯ ಎಂದು ಭಾವಿಸಬೇಕು ಎಂದರು.
2021-22ನೇ ಸಾಲೀನ ಬಸವ ವಸತಿ ಯೋಜನೆ ಅಡಿಯಲ್ಲಿ ಬಂದ ಯೋಜನೆಯ 1.20 ಲಕ್ಷ ರೂ. ಹಾಗೂ ನರೇಗಾ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ರೂ.28 ಸಾವಿರ ಸೇರಿ ಒಟ್ಟು 1.48 ಲಕ್ಷದ ಮನೆಯನ್ನು ಕಡಿಮೆ ಅವಧಿಯಲ್ಲಿ ಗ್ರಾ.ಪಂ ಸದಸ್ಯರಾದ ಕೆ.ಎಂ. ರಾಮಯ್ಯ ಅವರ ಶ್ರಮ ಮತ್ತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ಕಾರ್ಯಕ್ಷಮತೆಯಿಂದ ಮನೆ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದರು.
ಕೆದಮುಳ್ಳೂರು ಗ್ರಾ.ಪಂ ಸದಸ್ಯ ಕೆ.ಎಂ.ರಾಮಯ್ಯ ಮಾತನಾಡಿ, ಸುಮಾರು ಮೂರು ವರ್ಷಗಳ ಹಿಂದೆ ಸಹೋದರರು ವಾಸವಾಗಿದ್ದ ಮನೆ ಬಿದ್ದುಹೋಗಿತ್ತು. ಮಾನವೀಯ ನೆಲೆಯಲ್ಲಿ ತತ್ಕಾಲಿಕವಾಗಿ ಗುಡಿಸಲು ನಿರ್ಮಾಣ ಮಾಡಿ ವಾಸವಿರಲು ಅನುವು ಮಾಡಿಕೊಟ್ಟಿದ್ದೆ, ನಂತರದಲ್ಲಿ ಸಹೋದರರನ್ನು ಸಮೀಪದ ಬಾಡಿಗೆ ಮನೆಯಲ್ಲಿರಿಸಿ ಇದೀಗ ಎರಡು ತಿಂಗಳ ಅವಧಿಯಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. ಮನೆಯ ನಿರ್ಮಾಣ ಕಾರ್ಯದಲ್ಲಿ ಹಿಂದೂ ಮಲಯಾಳಿ ಅಸೋಶಿಯೇಷನ್ ಅವರು ನೆರವು ಹಾಗೂ ಪಂಚಾಯಿತಿ ಪಿ.ಡಿ.ಓ ಪ್ರಮೋದ್ ಅವರ ಸಹಕಾರದಿಂದ ಶೀಘ್ರ ಪೂರ್ಣಗೊಳಿಸಿ ಸಹೋದರರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದರು.
ವಿರಾಜಪೇಟೆ ಹಿಂದೂ ಮಲಯಾಳಿ ಅಸೋಶಿಯೇಷನ್ ಅಧ್ಯಕ್ಷ ಎ.ವಿನೂಪ್ ಕುಮಾರ್ ಮಾತನಾಡಿ, ಸರ್ಕಾರದಿಂದ ಹಲವು ಯೋಜನೆಗಳು ಜಾರಿಗೊಳ್ಳುತ್ತಿದೆ. ಜನಪ್ರತಿನಿಧಿಗಳು ಮತ್ತು ಇಲಾಖೆಯ ಸಿಬ್ಬಂದಿಗಳು ಶ್ರಮವಹಿಸಿದ್ದಲ್ಲಿ ಯೋಜನೆಗಳು ಶಾಶ್ವತ ರೂಪವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಂದಾಯಧಿಕಾರಿ ಹರೀಶ್, ಗ್ರಾಮ ಲೆಕ್ಕಿಗರಾದ ಹೇಮಂತ್, ಕೆದಮುಳ್ಳೂರು ಗ್ರಾ.ಪಂ ಅಧ್ಯಕ್ಷರಾದ ನಡಿಕೇರಿಯಂಡ ಶೀಲಾ ಮೇದಪ್ಪ, ಉಪಾಧ್ಯಕ್ಷರಾದ ಎಂ.ಬಿ. ಮೀನಾಕ್ಷಿ, ಸದಸ್ಯರಾದ ಜಯಂತಿ, ಕಾರ್ಯದರ್ಶಿ ಪಿ.ಎಸ್.ಸತೀಶ್, ಹಿಂದೂ ಮಲಯಾಳಿ ಅಸೋಶಿಯೆಷನ್ ನ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ