ಮಡಿಕೇರಿ ಜ.20 : ಕೊಡಗಿನ ಎರಡು ಪುಣ್ಯ ಕ್ಷೇತ್ರಗಳಾದ ತಲಕಾವೇರಿ ಹಾಗೂ ಎಮ್ಮೆಮಾಡುಗೆ ಸಂಪರ್ಕ ಕಲ್ಪಿಸುವ ಮೂರ್ನಾಡು- ನಾಪೋಕ್ಲು ರಸ್ತೆಯನ್ನು ಸಂಪೂರ್ಣ ಡಾಂಬರೀಕರಣಗೊಳಿಸದಿದ್ದಲ್ಲಿ ಯುವ ಜಾತ್ಯತೀತ ಜನತಾದಳದ ವತಿಯಿಂದ ಗ್ರಾಮಸ್ಥರ ಸಹಕಾರದೊಂದಿಗೆ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಯುವ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜಿ.ಜಾಶಿರ್ ಎಚ್ಚರಿಕೆ ನೀಡಿದ್ದಾರೆ.
ಕಳೆದ 11 ವರ್ಷಗಳಿಂದ ಸಂಪೂರ್ಣವಾಗಿ ಹದಗೆಟ್ಟಿದ್ದ ರಸ್ತೆಯ ದುರಸ್ತಿಗೆ ಆಗ್ರಹಿಸಿ ಜಿಲ್ಲಾ ಜೆಡಿಎಸ್ ವತಿಯಿಂದ ಡಿ.22 ರಂದು ರಸ್ತೆ ತಡೆ ಪ್ರತಿಭಟನೆ ನಡೆಸಲಾಗಿತ್ತು. ಆ ಸಂದರ್ಭ ಸ್ಥಳಕ್ಕೆ ಆಗಮಿಸಿದ ಅಭಿಯಂತರರು 15 ದಿನಗಳಲ್ಲಿ ರಸ್ತೆ ದುರಸ್ತಿಪಡಿಸುವ ಭರವಸೆ ನೀಡಿದ್ದರು. ಇದೀಗ ರಸ್ತೆ ದುರಸ್ತಿ ಕಾರ್ಯ ಕಾಟಾಚಾರಕ್ಕಷ್ಟೇ ನಡೆಯುತ್ತಿದ್ದು, ಸಂಪೂರ್ಣ ರಸ್ತೆಯನ್ನು ಡಾಂಬರೀಕರಣಗೊಳಿಸದೆ ನಿರ್ಲಕ್ಷಿಸಲಾಗಿದೆ. ಕೆಲವು ಗುಂಡಿಗಳನ್ನಷ್ಟೇ ಮುಚ್ಚುವ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಸುಮಾರು 2 ವರ್ಷಗಳ ಹಿಂದೆ ಈ ರಸ್ತೆಯ ದುರಸ್ತಿಗಾಗಿ ಟೆಂಡರ್ ಪ್ರಕ್ರಿಯೆ ನಡೆದು ವಿರಾಜಪೇಟೆಯ ಗುತ್ತಿಗೆದಾರರೊಬ್ಬರು ಗುತ್ತಿಗೆ ಪಡೆದಿದ್ದರು. ಆದರೆ ಇವರು ಕಾಮಗಾರಿ ನಿರ್ವಹಿಸಿಲ್ಲ ಎನ್ನುವ ಮಾಹಿತಿ ಲಭಿಸಿದೆ. ಜೆಡಿಎಸ್ ಪ್ರತಿಭಟನೆಯ ನಂತರ ಮಡಿಕೇರಿಯ ಗುತ್ತಿಗೆದಾರರೊಬ್ಬರು ಅಧಿಕಾರಿಗಳ ಒತ್ತಡಕ್ಕೆ ಮಣಿದು ಕಾರ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಕ್ಷೇತ್ರದ ಶಾಸಕರಿಗೆ ಹೆಚ್ಚಿನ ಮತಗಳನ್ನು ನೀಡಿ ಈ ಭಾಗದ ಗ್ರಾಮಗಳ ಜನ ಗೆಲ್ಲಿಸುತ್ತಲೇ ಬರುತ್ತಿದ್ದಾರೆ. ಆದರೆ ಶಾಸಕರು ಇಲ್ಲಿನ ರಸ್ತೆಗಳ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಜಾಶಿರ್ ಆರೋಪಿಸಿದ್ದಾರೆ.
ಜನವರಿ ತಿಂಗಳ ಕೊನೆಯೊಳಗೆ ರಸ್ತೆಯನ್ನು ಸಂಪೂರ್ಣ ಡಾಂಬರೀಕರಣಗೊಳಿಸದಿದ್ದಲ್ಲಿ ಮಡಿಕೇರಿಯ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ತಿಳಿಸಿದ್ದಾರೆ.









