ಮಡಿಕೇರಿ, NEWS DESK ಫೆ.14 : ಮಡಿಕೇರಿ ನಗರದಲ್ಲಿ ಕಸ ವಿಲೇವಾರಿ ಸಮಸ್ಯೆ ಬಿಗಡಾಯಿಸಲು ಈ ಹಿಂದೆ ಅಧಿಕಾರದಲ್ಲಿದ್ದವರ ನಿರ್ಲಕ್ಷ್ಯವೇ ಕಾರಣವೆಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಟೀಕಿಸಿದ್ದಾರೆ.
ನಗರದ ಕಾಲೇಜು ರಸ್ತೆಯ ಸಿಪಿಸಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ನಾನು ಇತಿಹಾಸ ಕೆಣಕಲು ಇಷ್ಟಪಡುವವನಲ್ಲ, ಆದರೂ ಕೆಲವೊಮ್ಮೆ ಹೇಳಲೇ ಬೇಕಾಗುತ್ತದೆ. ಕಳೆದ ಅಧಿಕಾರವಧಿಯಲ್ಲಿ ಮಡಿಕೇರಿ ನಗರದಲ್ಲಿ ವಿಶೇಷ ಅನುದಾನದಲ್ಲಿ ಯಾವುದೇ ಕಾಮಗಾರಿಗಳು ನಡೆದಿಲ್ಲ. ಕೇವಲ ನಗರಸಭೆಯ ಅನುದಾನವನ್ನು ಬಳಸಿಕೊಳ್ಳಲಾಗಿದೆ, ಇತರ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಗಮನಹರಿಸಿಲ್ಲ. ಈ ಹಿಂದೆಯೇ ಕಸ ವಿಲೇವಾರಿ ಬಗ್ಗೆ ಗಮನಹರಿಸಿದ್ದರೆ ಇಂದು ಸಮಸ್ಯೆ ಬಿಗಡಾಯಿಸುತ್ತಿರಲಿಲ್ಲ, ಮೂಲಭೂತ ಸಮಸ್ಯೆಗಳನ್ನು ಕಡೆಗಣಿಸಿರುವುದು ದುರಂತ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳು ವಿಶೇಷವಾಗಿ ಬಿಡುಗಡೆ ಮಾಡಿರುವ ಅನುದಾನದಲ್ಲಿ 3.50 ಕೋಟಿ ರೂ.ಗಳನ್ನು ನಗರದ ರಸ್ತೆಗಳ ಅಭಿವೃದ್ಧಿಗಾಗಿ ವಿನಿಯೋಗಿಸಲಾಗಿದೆ. ನಗರದ ನಿವಾಸಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು, ನೀರಿನ ಬಾಟಲ್ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಇವುಗಳ ಬಳಕೆಯನ್ನು ನಿಯಂತ್ರಿಸುವ ಮೂಲಕ ಸ್ವಚ್ಛತೆ ಕಾಪಾಡಲು ಜನತೆ ಸಹಕಾರ ನೀಡಬೇಕು ಎಂದು ಶಾಸಕರು ಮನವಿ ಮಾಡಿದರು.
ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಬಡಾವಣೆಯ ನಗರಸಭಾ ಸದಸ್ಯ ಬಿ.ವೈ.ರಾಜೇಶ್ ಅವರು ನಾಗರೀಕರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸ್ಥಳೀಯ ಮಸೀದಿಯ ಅಧ್ಯಕ್ಷ ಜಿ.ಹೆಚ್.ಮೊಹಮ್ಮದ್ ಹನೀಫ್ ಸರ್ವರನ್ನು ಸ್ವಾಗತಿಸಿ ಬಡಾವಣೆಗೆ ಬೇಕಾಗಿರುವ ಮೂಲಭೂತ ಸೌಲಭ್ಯಗಳ ಕುರಿತು ಗಮನ ಸೆಳೆದರು.
ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಮಸೀದಿಯ ಧರ್ಮಗುರು ಉಮ್ಮರ್ ಮೌಲವಿ, ಕಾರ್ಯದರ್ಶಿ ಎಂ.ಎ.ಮುಸ್ತಫ, ಪ್ರಮುಖರಾದ ಸಿ.ಹೆಚ್.ಅಫ್ಸರ್, ಮೋಹನ್ ಕುಮಾರ್, ಸಜಿ, ಜೇಕಬ್, ಗಣೇಶ್, ಜಾಯ್ ಜೋಸೆಫ್ ಹಾಗೂ ಪತ್ರಕರ್ತ ಅಬ್ದುಲ್ಲ ಮಡಿಕೇರಿ ಉಪಸ್ಥಿತರಿದ್ದರು.








