ಸಿದ್ದಾಪುರ ಜ.21 : ಭಾರತ ಫುಟ್ಬಾಲ್ ತಂಡವು ಬಲಿಷ್ಠವಾಗಿದ್ದು, ಮುಂದಿನ ಅಥವಾ ಅದಾದನಂತರದಲ್ಲಿ ವಿಶ್ವಕಪ್ ಆಡಲಿದೆ ಎಂದು ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಹಾಗೂ ಹಾಲಿ ತಾಂತ್ರಿಕ ಸಮಿತಿ ಸದಸ್ಯ ಐ.ಎಂ ವಿಜಯನ್ ಅಭಿಪ್ರಾಯಪಟ್ಟರು.
ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಅಮ್ಮತ್ತಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ತಂಡ ಯುವ ಹಾಗೂ ಅನುಭವಿ ಆಟಗಾರರ ಮಿಶ್ರಿತ ತಂಡವಾಗಿದೆ. ಮುಂದಿನ ವಿಶ್ವಕಪ್ ಫುಟ್ಬಾಲ್ ಅರ್ಹತಾ ಪಂದ್ಯಾವಳಿಯಲ್ಲಿ ಭಾರತ ತಂಡ ಗೆದ್ದು ವಿಶ್ವಕಪ್ ಅರ್ಹತೆ ಪಡೆಯುವ ಅವಕಾಶ ಇದೆ ಎಂದರು. ಏಷ್ಯಾ ಈ ಹಿಂದೆ ಫುಟ್ಬಾಲ್ ನಲ್ಲಿ ಹಿಂದುಳಿದಿತ್ತು. ಪ್ರಸ್ತುತ ಏಷ್ಯಾದಿಂದ 8 ತಂಡಗಳು ವಿಶ್ವಕಪ್ ನಲ್ಲಿ ಭಾಗವಹಿಸಿದೆ. ದೊಡ್ಡ ದೊಡ್ಡ ರಾಷ್ಟ್ರಗಳನ್ನು ಮಣಿಸಿದೆ. ಹಾಗೇಯೆ ಭಾರತವೂ ಕೂಡ ಮುಂದೊಂದು ದಿನ ವಿಶ್ವಕಪ್ ಆಡಲಿದೆ ಎಂದರು.
ಭಾರತದಲ್ಲಿ ಇಂಡಿಯನ್ ಸೂಪರ್ ಲೀಗ್ ಆರಂಭವಾದ ಬಳಿಕ ಭಾರತೀಯ ಫುಟ್ಬಾಲ್ ಗೆ ಪುನಶ್ಚೇತನ ದೊರಕಿದೆ. ಅಂತರರಾಷ್ಟ್ರೀಯ ಆಟಗಾರರು ಐ.ಎಸ್.ಎಲ್ ಆಡುತ್ತಿದ್ದಾರೆ. ಆ ಮೂಲಕ ಸ್ಥಳೀಯರಿಗೆ ಪ್ರತಿಭೆ ಅನಾವರಣಕ್ಕೆ ವೇದಿಕೆಯೊಂದಿಗೆ, ಅಂತರರಾಷ್ಟ್ರೀಯ ಆಟಗಾರರೊಂದಿಗೆ ಆಡಲು ಅವಕಾಶ ದೊರಕಿದೆ ಎಂದರು.
ಇತ್ತೀಚೆಗಿನ ದಿನಗಳಲ್ಲಿ ಪಂದ್ಯಾವಳಿಗಳು ಕಡಿಮೆ ಆಗುತ್ತಿದೆ. ಹಾಗಾಗಿ ಪ್ರತಿಭೆಗಳಿಗೆ ಅವಕಾಶ ದೊರಕುತ್ತಿಲ್ಲ. ಕೊಡಗು ಕ್ರೀಡಾ ಜಿಲ್ಲೆಯಾಗಿದ್ದು, ಫುಟ್ಬಾಲ್ ಗೂ ಹೆಚ್ಚು ಮಹತ್ವ ನೀಡಲು ಸಲಹೆ ನೀಡಿದರು.
ಕ್ರಿಕೆಟ್ ಶ್ರೀಮಂತ ಕ್ರೀಡೆಯಾಗಿದ್ದು, ಭಾರತದಲ್ಲಿ ಕ್ರಿಕೆಟ್ ಗೆ ಹೆಚ್ಚು ಒಲವಿದೆ. ವಿಶ್ವದಲ್ಲಿ ಫುಟ್ಬಾಲ್ ಜನಪ್ರಿಯ ಕ್ರೀಡೆಯಾಗಿದ್ದು, ಇತ್ತೀಚೆಗಿನ ದಿನಗಳಲ್ಲಿ ಯುವ ಜನತೆ ಫುಟ್ಬಾಲ್ ಕಡೆ ಒಲವು ತೋರುತ್ತಿದ್ದಾರೆ ಎಂದರು.
ತಮ್ಮ ಪ್ರೀತಿಯ ತಂಡ ಯಾವುದೆಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅರ್ಜೆಂಟೀನಾ ಎಂದು ನಗುಮುಖದಿಂದ ಹೇಳಿದರು. ವಿಶ್ವ ಫುಟ್ಬಾಲ್ ನ ದೇವರು ಎಂದು ಹೇಳಲ್ಪಡುವ ಮರ್ಡೋನ ಜೊತೆಗೆ ಆಡಿದ್ದು ತನ್ನ ಜೀವನದ ಅವಿಸ್ಮರಣೇಯ ಕ್ಷಣ ಎಂದು ಬಣ್ಣಿಸಿದರು.
ಈ ಹಿಂದೆ ಸರ್ಕಾರಿ ನೌಕರಿಯ ಉದ್ದೇಶದಿಂದ ಫುಟ್ಬಾಲ್ ಸರಿದಂತೆ ಕ್ರೀಡೆಯನ್ನು ಆಡುತ್ತಿದ್ದರು. ಆದರೇ ಇಂದಿನ ಪೋಷಕರು ಸಣ್ಣ ಪ್ರಾಯದಿಂದಲೇ ಕ್ರೀಡೆಗೆ ಮಹತ್ವ ನೀಡುತ್ತಿದ್ದಾರೆ. ಸಣ್ಣ ಪ್ರಾಯದಿಂದಲೇ ಪರಿಶೀಲನೆ ಅಗತ್ಯ. ವಿದ್ಯಾರ್ಥಿಗಳನ್ನು ಮೊಬೈಲ್ ನಲ್ಲಿ ಆಟವಾಡದೇ ಮೈದಾನದಲ್ಲಿ ಆಡಲು ಪ್ರೋತ್ಸಾಹಿಸಬೇಕು ಎಂದರು.
ಕೊಡಗು ಉತ್ತಮ ಪ್ರಕೃತಿ ಹೊಂದಿರುವ ಪ್ರದೇಶ. ಮಿಲನ್ಸ್ ತಂಡ ಜಿಲ್ಲೆಯ ಫುಟ್ಬಾಲ್ ನಲ್ಲಿ ಮೈಲುಗಲ್ಲು ಹಾಕಿದೆ. ಜಿಲ್ಲೆಯಲ್ಲಿ ಹೆಚ್ಚೆಚ್ಚು ಫುಟ್ಬಾಲ್ ಆಟಗಾರರು ತಯಾರಾಗಲಿ ಎಂದು ಆಶಿಸಿದರು.
ಈ ಸಂದರ್ಭ ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರೆಜಿತ್ ಕುಮಾರ್ ಗುಹ್ಯ, ಪ್ರಧಾನ ಕಾರ್ಯದರ್ಶಿ ಎ.ಎಸ್ ಮುಸ್ತಫಾ, ಉಪಾಧ್ಯಕ್ಷ ಪುತ್ತಂ ಪ್ರದೀಪ್, ನಿರ್ದೇಶಕರಾದ ಕುಟ್ಟಂಡ ಅಜಿತ್ ಕರುಂಬಯ್ಯ, ಕಿಶೋರ್ ಕುಮಾರ್ ಶೆಟ್ಟಿ, ಸದಸ್ಯರಾದ ಎ.ಎನ್ ವಾಸು ಇದ್ದರು.