ಸುಂಟಿಕೊಪ್ಪ,ಜ.21: ಪರಿಶಿಷ್ಟ, ಪಂಗಡ, ಪರಿಶಿಷ್ಟ ಜಾತಿಯ ಕುಟುಂಬಸ್ಥರಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್, ವೋಟರ್ ಐಡಿ ದೊರೆತ್ತಿಲ್ಲ. ದೇವರಕಾಡು ಜಾಗ ಒತ್ತುವರಿಯಾಗುತ್ತಿದೆ. ಕಾಡಾನೆಗಳಿಂದ ಬೆಳೆಗಾರರು ಹೈರಾಣಾಗಿದ್ದಾರೆ. ಕಸವಿಲೇವಾರಿಗೆ ಜಾಗವಿಲ್ಲ ಎಂದು ಗ್ರಾಮಸ್ಥರು ಸಮಸ್ಯೆಗಳನ್ನು ಬಿಚ್ಚಿಟ್ಟರು.
ಕೆದಕಲ್ ಗ್ರಾ.ಪಂ ಅಧ್ಯಕ್ಷೆ ವಿಸ್ಮಿತ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಮುದಾಯ ಭವನದಲ್ಲಿ ನಡೆದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ” ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನ ಸೆಳೆದರು.
ಈ ಸಂದರ್ಭ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಮಾತನಾಡಿ ಸರಕಾರದ ಪ್ರತಿಯೊಂದು ಯೋಜನೆಗಳು ಜನರ ಮನೆ ಮನೆಗೆ ತಲುಪಬೇಕು ಎಂಬ ಮಹಾತ್ವಾಕಾಂಕ್ಷೆಯಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಎಲ್ಲಾ ಇಲಾಖೆ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಇಲಿಯೇ ಸಮಸ್ಯೆಗಳನ್ನು ಬಗೆಹರಿಸುವುದು ಕೆಲವೊಂದು ಕ್ಲೀಷ್ಟ ಸಮಸ್ಯೆಗಳನ್ನು ನಿಗದಿತ ಕಾಲಾವಕಾಶದಲ್ಲಿ ಪರಿಹರಿಸಿಕೊಡಲಾಗುವುದು ಎಂದು ಹೇಳಿದರು.
ಕೆದಕಲ್ ವಿಭಾಗದಲ್ಲಿ ಬಹಳಷ್ಟು ಪರಿಶೀಷ್ಟ ಪಂಗಡ, ಪರಿಶಿಷ್ಟ ಜಾತಿಯ ಫಲಾನುಭವಿಗಳು ತೋಟದ ಲೈನ್ ಮನೆಯಲ್ಲಿ ವಾಸವಾಗಿದ್ದಾರೆ. ಅವರುಗಳಿಗೆ ಇದುವರೆಗೆ ಮತದಾರರ ಚೀಟಿ, ಪಡಿತರ ಕಾರ್ಡ್, ಆಧಾರ ಕಾರ್ಡ್ ಇನ್ನೂ ಲಭಿಸಿಲ್ಲ. ಇದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಮ್ಮನ್ನು ಅಣಕಿಸುವಂತಾಗಿದೆ ಎಂದು ಗ್ರಾಮ ಸದಸ್ಯ ಶಿವಕಮಾರ್ ಹೇಳಿದರು.
ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ಎಲ್ಲಾ ಐದು ಕುಟುಂಬಗಳು ಕಚೇರಿಗೆ ಆಗಮಿಸುವಂತೆ ತಿಳಿಸಿದರು.
ಕೆದಕಲ್ ಗ್ರಾ.ಪಂ ಯಲ್ಲಿ ಸರಕಾರದ ಗ್ರಾಮ 1 ಕೇಂದ್ರ ಇನ್ನೂ ತೆರೆದಿಲ್ಲ. ಆದ್ದರಿಂದ ಗ್ರಾಮಸ್ಥರಿಗೆ ಸರಕಾರದ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಗ್ರಾ.ಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ರೈ ಹೇಳಿದರು.
ಕೆದಕಲ್ ಗ್ರಾ.ಪಂ ವಿಭಾಗದಲ್ಲಿ ಕಾಡುಪ್ರಾಣಿಗಳ ಉಪಟಳದಿಂದ ಬೆಳೆಗಾರರು ಹೈರಾಣಾಗಿದ್ದಾರೆ. ಮೊದಲೇ ಬೆಳೆ ಇಳುವರಿ ಕಡಿಮೆಯಾಗಿದೆ. ಕಾಫಿ ಹಣ್ಣುಗಳನ್ನು ಮಂಗಗಳು ತಿಂದು ನಾಶಪಡಿಸುತ್ತಿದೆ. ಕಾಡಾನೆ, ಕಾಡೆಮ್ಮ ತೋಟದಲ್ಲಿ ಅಡ್ಡಾಡುವುದರಿಂದ ಕಾಫಿ ಗಿಡದ ರಂಬೆಗಳು ನಾಶವಾಗುತ್ತಿದೆ. ಅರಣ್ಯ ಇಲಾಖೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಬೆಳೆಗಾರರಾದ ಯಂಕನ ಗೋಫಿನಾಥ್, ಪುಲ್ಲೇರಕಾಶಪ್ಪ, ತಿಮ್ಮಯ್ಯ ಅಸಾಮಾಧಾನ ವ್ಯಕ್ತಪಡಿಸಿದರು.
ಕೆದಕಲ್ ಶ್ರೀ ಭದ್ರಕಾಳೇಶ್ವರ ದೇವಾಲಯದ ದೇವರ ವನ ಒತ್ತುವರಿಯಾಗುತ್ತಿದೆ. ಈ ಬಗ್ಗೆ ಅರಣ್ಯ ಇಲಾಖೆಯವರು ಏನು ಕ್ರಮ ಕೈಗೊಂಡಿದ್ದಾರೆ. ಮರಗಳನ್ನು ಕಡಿಯಲಾಗಿದೆ. ರಸ್ತೆ ಮಾಡಲಾಗುತ್ತಿದೆ. ಗ್ರಾಮಸ್ಥರಿಗೆ ಪಂಚಾಯಿತಿಗೂ ಮಾಹಿತಿ ಸಿಗುತ್ತಿಲ್ಲ ಮೀಸಲು ಅರಣ್ಯ ಪ್ರದೇಶದಲ್ಲಿ ಈ ರೀತಿ ಚಟುವಟಿಕೆ ನಡೆಸುವುದು ಸಾಧ್ಯವೆ ಎಂದು ಪುಲ್ಲೇರ ಕಾಳಪ್ಪ, ತಿಮ್ಮಯ್ಯ ಗೋಪಿನಾಥ್ ಆಕ್ರೋಶ ವ್ಯಕ್ತಪಡಿಸಿದರು.
ದೇವರ ಬನದ ಜಾಗದ ಗಡಿ ಗುರುತುಪಡಿಸಿ ದೇವಾಲಯ ಸಮಿತಿಗೆ ಅರಣ್ಯ ಇಲಾಖೆ ವರದಿ ನೀಡಬೇಕೆಂದು ಅವರುಗಳು ಆಗ್ರಹಿಸಿದರು.
ತಹಶೀಲ್ದಾರರು ದೇವರ ಜಾಗ ಒತ್ತುವರಿ, ಮರ ಕಡಿತ, ರಸ್ತೆ ನಿರ್ಮಾಣದ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ಮಾಹಿತಿ ತರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕಾರ್ಯಕ್ರಮದ ಮೊದಲಿಗೆ ಪಂಚಾಯಿತಿ ಆವರಣದಲ್ಲಿ ಸಸಿ ನೆಡಲಾಯಿತು.
ಗ್ರಾ.ಪಂ ಉಪಾಧ್ಯಕ್ಷ ಪೊನ್ನಪ್ಪ, ಸದಸ್ಯರುಗಳಾದ ಪುಷ್ಪಾ, ಪಾರ್ವತಿ, ಆನಂದ, ಶಿವಕುಮಾರ್, ತಾಲೂಕು ಪಂಚಾಯಿತಿ ಅಧಿಕಾರಿ ರಾಜಶೇಖರ, ಆಹಾರ ಇಲಾಖೆ ನಿರೀಕ್ಷಕರಾದ ಸ್ವಾತಿ, ಉಪತಹಶೀಲ್ಧಾರ್ ಶಿವಪ್ಪ, ಅರಣ್ಯ ಇಲಾಖೆ ಅಧಿಕಾರಿ ದೇವಯ್ಯ, ಶಿಕ್ಷಣ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು, ಗ್ರಾ.ಪಂ.ಪಿಡಿಓ ರಾಜಶೇಖರ, ಕಾರ್ಯದರ್ಶಿ ಸುನಿತಾ, ಕಂದಾಯ ಪರಿವೀಕ್ಷಕರಾದ ಪ್ರಶಾಂತ್, ಗ್ರಾಮಲೆಕ್ಕಿಗಾರುಗಳಾದ ನಸೀಮ, ನಾಗೇಂದ್ರ, ಜಯಂತ್ ಹಾಗೂ ಗ್ರಾಮ ಸಹಾಯಕರು ಹಾಜರಿದ್ದರು.